ADVERTISEMENT

ಮಾನ್ವಿ | ಆದರ್ಶ ವಿದ್ಯಾಲಯ: ₹2.76 ಕೋಟಿ ಅನುದಾನ ಸರ್ಕಾರಕ್ಕೆ ವಾಪಸ್‌

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 6:18 IST
Last Updated 28 ಜುಲೈ 2025, 6:18 IST
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿರುವ ಆದರ್ಶ ವಿದ್ಯಾಲಯ
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿರುವ ಆದರ್ಶ ವಿದ್ಯಾಲಯ   

ಮಾನ್ವಿ (ರಾಯಚೂರು ಜಿಲ್ಲೆ): ರಾಯಚೂರು ಜಿಲ್ಲೆಯಲ್ಲಿನ ಐದು ಆದರ್ಶ ವಿದ್ಯಾಲಯಗಳನ್ನು ಉನ್ನತೀಕರಿಸಿ ಪದವಿ ಪೂರ್ವ ಕಾಲೇಜು ಆರಂಭಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳದೇ ಇರುವುದರಿಂದ ಒಟ್ಟು ₹2.76 ಕೋಟಿ ಅನುದಾನ ಸರ್ಕಾರಕ್ಕೆ ವಾಪಸ್‌ ಹೋಗಿದೆ.

ಕಳೆದ ವರ್ಷ ₹40.79 ಕೋಟಿ ವೆಚ್ಚದಲ್ಲಿ ರಾಜ್ಯದ 74 ಆದರ್ಶ ವಿದ್ಯಾಲಯಗಳನ್ನು ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಅದರಂತೆ ಜಿಲ್ಲೆಯ ನೀರಮಾನ್ವಿ, ಯರಮರಸ್, ಅರಕೇರಾ, ಸಿಂಧನೂರು ಮತ್ತು ಲಿಂಗಸೂಗುರು ಪಟ್ಟಣಗಳಲ್ಲಿರುವ ಆದರ್ಶ ವಿದ್ಯಾಲಯಗಳು ಪದವಿ ಪೂರ್ವ ಕಾಲೇಜುಗಳಾಗಿ ಉನ್ನತೀಕರಣಕ್ಕೆ ಆಯ್ಕೆಯಾಗಿದ್ದವು.

ನಿಗದಿತ ಸಮಯಕ್ಕೆ ಆದರ್ಶ ವಿದ್ಯಾಲಯಗಳಲ್ಲಿ ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ ಆರಂಭಿಸಲು ಸುಸಜ್ಜಿತ ಕೊಠಡಿ, ಪ್ರಯೋಗಾಲಯ ವ್ಯವಸ್ಥೆ, ಅತಿಥಿ ಉಪನ್ಯಾಸಕರ ನೇಮಕ ಸೇರಿದಂತೆ ಇತರ ಮೂಲಸೌಕರ್ಯ ಕಲ್ಪಿಸುವಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ಆರಂಭಗೊಳ್ಳದೇ ಇರುವುದರಿಂದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ.

ADVERTISEMENT

ಕಳೆದ ಜನವರಿ ತಿಂಗಳಲ್ಲಿ ಪ್ರತಿ ಆದರ್ಶ ವಿದ್ಯಾಲಯದ ಉನ್ನತೀಕರಿಸಲು ತಲಾ ₹55.13 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಕಾಲೇಜು ವಿಭಾಗ ಆರಂಭಿಸಲು ಹಾಗೂ ಮೂಲಸೌಕರ್ಯ ಕಲ್ಪಿಸಲು ಮಂಜೂರಾದ ಅನುದಾನವನ್ನು ಮಾರ್ಚ್31ರ ಒಳಗೆ ಬಳಸದಿರುವುದರಿಂದ ಅನುದಾನ ಸರ್ಕಾರಕ್ಕೆ ವಾಪಸ್ ಹೋಗಿದೆ.

‘ರಾಯಚೂರು ಜಿಲ್ಲೆ ಹೊರತುಪಡಿಸಿ ರಾಜ್ಯದ ಬೇರೆ ಜಿಲ್ಲೆಗಳಲ್ಲಿರುವ 69 ಆದರ್ಶ ವಿದ್ಯಾಲಯಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಉನ್ನತೀಕರಣಗೊಂಡಿವೆ. ಜಿಲ್ಲೆಯ ಅಧಿಕಾರಿಗಳ ವೈಫಲ್ಯ ಖಂಡನೀಯ’ ಎಂದು ಪೋಷಕರು ಹಾಗೂ ಸ್ಥಳೀಯ ಸಂಘ–ಸಂಸ್ಥೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಸರ್ಕಾರದಿಂದ ಅನುದಾನ ವಾಪಸ್ ಪಡೆದು ಆದರ್ಶ ವಿದ್ಯಾಲಯಗಳ ಉನ್ನತೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
- ಕೊಟ್ರಬಸಪ್ಪ, ಉಪ ನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ರಾಯಚೂರು
ಆದರ್ಶ ವಿದ್ಯಾಲಯಗಳ ಉನ್ನತೀಕರಿಸದೇ ಕರ್ತವ್ಯ ಲೋಪ ಎಸಗಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕು
-ಜೆ.ಆಂಜನೇಯ ನಾಯಕ ನಿವೃತ್ತ ಯೋಧ ನೀರಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.