
ಚುನಾವಣೆ
ಮಸ್ಕಿ: ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಡಿ. 15ರಂದು (ಸೋಮವಾರ) ಚುನಾವಣೆ ನಡೆಯಲಿದೆ. ಬಿಜೆಪಿ ಸದಸ್ಯ ಸುರೇಶ ಹರಸೂರು ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಎಲ್ಲಾ 15 ಸದಸ್ಯರಿಗೆ ‘ವಿಪ್’ ಜಾರಿ ಮಾಡಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ ಅವರು ಸುರೇಶ ಹರಸೂರು ಅವರಿಗೆ ಮತ ಚಲಾಯಿಸುವಂತೆ ಸೂಚಿಸಿದ್ದಾರೆ.
23 ಸದಸ್ಯಬಲದ ಪುರಸಭೆಯಲ್ಲಿ ಬಿಜೆಪಿ 15, ಕಾಂಗ್ರೆಸ್ 8 ಸ್ಥಾನ ಹೊಂದಿವೆ. ಒಬ್ಬ ಕಾಂಗ್ರೆಸ್ ಸದಸ್ಯರ ನಿಧನದಿಂದ ಆ ಪಕ್ಷದ ಸದಸ್ಯರ ಸಂಖ್ಯೆ 7 ಕ್ಕೆ ಇಳಿದಿದೆ. ಸದಸ್ಯ ಪುರಸಭೆಯಲ್ಲಿ ಬಿಜೆಪಿ 15 ಹಾಗೂ ಕಾಂಗ್ರೆಸ್ 7 ಸೇರಿ 22 ಜನ ಇದ್ದಾರೆ.
ಬಿಸಿಎಂ (2 ಎ) ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳು ಇದ್ದುದ್ದರಿಂದ ಮೊದಲನೆ ಅವದಿಗೆ ಮಲ್ಲಯ್ಯ ಅಂಬಾಡಿ ಹಾಗೂ ಎರಡನೇ ಅವಧಿಗೆ ಸುರೇಶ ಹರಸೂರು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ನೇತೃತ್ವದ ಬಿಜೆಪಿ ಮುಖಂಡರು ಹಾಗೂ ಪಕ್ಷದ ವರಿಷ್ಠರು ತಿರ್ಮಾನಿಸಿದ್ದರು. ಮೊದಲನೇ ಅಧ್ಯಕ್ಷರಾಗಿದ್ದ ಮಲ್ಲಯ್ಯ ಅಂಬಾಡಿ ತಮ್ಮ ಅವದಿಪೂರ್ಣಗೊಂಡ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಎರಡನೇ ಅವದಿಯ ಅಧ್ಯಕ್ಷ ಸ್ಥಾನಕ್ಕೆ ಈ ಚುನಾವಣೆ ನಿಗದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.