ADVERTISEMENT

ಸಿಂಧನೂರು: ರೈತನ ಮಗಳು ಪಿಎಸ್‌ಐ ಹುದ್ದೆಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 16:26 IST
Last Updated 15 ಸೆಪ್ಟೆಂಬರ್ 2020, 16:26 IST
ದುರ್ಗಾಭವಾನಿ
ದುರ್ಗಾಭವಾನಿ   

ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಶ್ರೀನಿವಾಸ್‌ ಕ್ಯಾಂಪಿನ ರೈತ ರಾಮಕೃಷ್ಣ ಉಪಲಪಾಟಿ ಅವರ ಪುತ್ರಿ ದುರ್ಗಾಭವಾನಿ ಅವರು ಮಹಿಳಾ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.

ಈಚೆಗೆ ಬಿಡುಗಡೆಯಾದ ಮಹಿಳಾ ಪಿಎಸ್ಐ ಆಯ್ಕೆಪಟ್ಟಿಯಲ್ಲಿ 29ನೇ ರ‍್ಯಾಂಕ್‌ ಪಡೆದಿರುವ ದುರ್ಗಭವಾನಿ ಅವರು, ಧಾರವಾಡದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ ಅಗ್ರೀ ಪದವಿಯನ್ನು ಕಳೆದ ವರ್ಷ ಪೂರ್ಣಗೊಳಿಸಿದ್ದಾರೆ. ಪೊಲೀಸ್‌ ಇಲಾಖೆಗೆ ಸೇರ್ಪಡೆ ಆಗಬೇಕು ಎನ್ನುವ ತುಡಿತದಿಂದ ಧಾರವಾಡದಲ್ಲಿಯೇ ಇದ್ದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಂಡು ಪರೀಕ್ಷೆ ಬರೆದಿದ್ದರು.

‘ನನಗೆ ಶಿಕ್ಷಣದ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ. ಮಗಳು ಓದುವುದಕ್ಕೆ ಬೆಂಬಲ ನೀಡುತ್ತಾ ಬಂದಿದ್ದೇವೆ. ಪಿಎಸ್‌ಐ ಹುದ್ದೆಗೆ ಆಯ್ಕೆ ಆಗಿರುವುದು ಖುಷಿ ತಂದಿದೆ. ಮಗಳ ಆಸೆಗಳಿಗೆ ನಮ್ಮ ಬೆಂಬಲ ಸದಾ ಇದೆ’ ಎಂದು ರೈತ ರಾಮಕೃಷ್ಣ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ADVERTISEMENT

10 ಎಕರೆ ಜಮೀನಿನ ಒಡೆಯರಾದ ರಾಮಕೃಷ್ಣ ಅವರಿಗೆ ದುರ್ಗಭವಾನಿ ಹಿರಿಯ ಪುತ್ರಿ. ಇನ್ನೊಬ್ಬ ಕಿರಿಯ ಪುತ್ರ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ದುರ್ಗಾಭವಾನಿ ಅವರು ಸಿಂಧನೂರಿನ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ 1 ರಿಂದ 10 ತರಗತಿವರೆಗೂ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಸ್ಥಳೀಯ ಡೆಫೋಡಿಲ್ಸ್‌ ಶಿಕ್ಷಣ ಸಂಸ್ಥೆಯ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಆನಂತರ ಬಿಎಸ್‌ಸಿ ಅಗ್ರಿ ಸೀಟು ಪಡೆದು ಧಾರವಾಡಕ್ಕೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.