
ಮಾನ್ವಿಯಲ್ಲಿ ಸೋಮವಾರ ಶಾಸಕ ಜಿ.ಹಂಪಯ್ಯ ನಾಯಕ ಅವರು ಹತ್ತಿ ಖರೀದಿ ಕೇಂದ್ರವನ್ನು ಉದ್ಘಾಟಿಸಿದರು
ಮಾನ್ವಿ: ‘ರೈತರ ಹಿತ ಕಾಪಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದು ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.
ಸೋಮವಾರ ಪಟ್ಟಣದಲ್ಲಿ ಭಾರತೀಯ ಹತ್ತಿ ನಿಗಮ ನಿಯಮಿತ ಹುಬ್ಬಳ್ಳಿ ಶಾಖೆ ವತಿಯಿಂದ ಹತ್ತಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಂದ ಖರೀದಿ ಮಾಡಿರುವ ಹತ್ತಿಗೆ ಎರಡು ಅಥವಾ ಮೂರು ದಿನಗಳಲ್ಲಿ ಅವರ ಖಾತೆಗೆ ಹಣವನ್ನು ಜಮೆ ಮಾಡಲೇಬೇಕು ಎಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
‘ಈಗಾಗಲೇ ರೈತರು ತುಂಬಾ ಸಂಕಷ್ಟ ಪರಿಸ್ಥಿತಿಯಲ್ಲಿದ್ದು, ಮಳೆಯಿಂದ ಅಪಾರವಾದ ಬೆಳೆ ನಷ್ಟ ಸಂಭವಿಸಿದೆ. ಬೆಳೆ ಹಾನಿ ಸಮೀಕ್ಷಾ ಕಾರ್ಯವೂ ಸಂಪೂರ್ಣ ಮುಗಿದಿದ್ದು, ಕೆಲವು ತಾಂತ್ರಿಕ ಅಡಚಣೆಗಳಿಂದ ಪರಿಹಾರ ನೀಡುವಲ್ಲಿ ವಿಳಂಬವಾಗಿದೆ. ಆದಷ್ಟು ಬೇಗನೆ ಸರ್ಕಾರದ ಪರಿಹಾರ ಹಣ ಪಾವತಿಯಾಗಲಿದೆ’ ಎಂದರು.
‘ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಹತ್ತಿ ಬೆಳೆಯನ್ನು ಬೆಳೆದಿದ್ದಾರೆ. ಇದುವರೆಗೆ ಸುಮಾರು 3,140 ರೈತರ ನೋಂದಣಿ ಮಾಡಿಸಿದ್ದು, ಇನ್ನುಳಿದ ರೈತರ ನೋಂದಣಿ ಕಾರ್ಯ ನಿಗದಿತ ದಿನಗಳ ಒಳಗೆ ಪೂರ್ಣಗೊಳಿಸಬೇಕು’ ಎಂದು ಸೂಚನೆ ನೀಡಿದರು.
‘ಹತ್ತಿ ಖರೀದಿ ಕೇಂದ್ರಕ್ಕೆ ಪ್ರಾರಂಭಕ್ಕೆ ಸಚಿವ ಎನ್.ಎಸ್. ಬೋಸರಾಜು ಹಾಗೂ ನಾನು ಜಿಲ್ಲಾಧಿಕಾರಿಗೆ ಒತ್ತಡ ಹಾಕಿದ್ದರಿಂದ ಜಿಲ್ಲಾಧಿಕಾರಿ ಸರ್ಕಾರ ಮಟ್ಟದಲ್ಲಿ ಚರ್ಚಿಸಿ ರಾಜ್ಯದಲ್ಲಿಯೇ ಪ್ರಪ್ರಥಮ ಹತ್ತಿ ಖರೀದಿ ಕೇಂದ್ರವನ್ನು ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರು ಮಾಡಿಸಿದ್ದಾರೆ’ ಎಂದರು.
ಈ ವೇಳೆ ತಹಶೀಲ್ದಾರ್ ಭೀಮರಾಯ ರಾಮಸಮುದ್ರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ರಂಗನಾಥ, ಭಾರತೀಯ ಹತ್ತಿ ನಿಗಮದ ಹುಬ್ಬಳ್ಳಿ ಶಾಖೆಯ ಅಧಿಕಾರಿಗಳಾದ ಎ.ಕೆ. ಶರ್ಮಾ ಹಾಗೂ ಅಜಯ್, ಶೈಲಜಾ ಕಾಟನ್ ಇಂಡಸ್ಟ್ರೀಸ್ ಮಾಲೀಕ ಸಿದ್ದಪ್ಪಗೌಡ ಆಲ್ದಾಳ, ರಾಜಾ ಸುಭಾಷ್ ಚಂದ್ರ ನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.