ADVERTISEMENT

ರಾಯಚೂರು | ಆಗಸ್ಟ್ 6 ರೊಳಗೆ ಅಕ್ರಮ ನೀರಾವರಿ ತಡೆಯಲಿ: ಚಾಮರಸ ಮಾಲಿಪಾಟೀಲ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 15:10 IST
Last Updated 27 ಜುಲೈ 2020, 15:10 IST

ರಾಯಚೂರು: ತುಂಗಭದ್ರಾ ಎಡದಂಡೆ ನಾಲೆಯಿಂದ ಅಕ್ರಮ ನೀರು ಪಡೆಯುವುದು ಮುಂದುವರೆದಿದ್ದನ್ನು ಆಗಸ್ಟ್ 6 ರೊಳಗಾಗಿ ತಡೆಯಬೇಕು. ಇಲ್ಲದಿದ್ದರೆರೈತರೇ ಕಾರ್ಯಾಚರಣೆ ನಡೆಸಿ ಅಕ್ರಮ ಪಂಪ್‌ಸೆಟ್ ತೆರವುಗೊಳಿಸುವರು ಎಂದು ತುಂಗಭದ್ರಾ ಎಡದಂಡೆ ಕಾಲುವೆ ಹಿತರಕ್ಷಣಾ ಸಮಿತಿಯ ಸಂಚಾಲಕ ಚಾಮರಸ ಮಾಲಿಪಾಟೀಲ ಎಚ್ಚರಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಎಡದಂಡೆ ಅಚ್ಚುಕಟ್ಟು ಪ್ರದೇಶದಲ್ಲಿ ಅಕ್ರಮ ನೀರಾವರಿ ತಡೆಯಲು ಮುಖ್ಯಮಂತ್ರಿ ಅವರ ಆದೇಶದಂತೆ ಕೊಪ್ಪಳ ಹಾಗೂ ರಾಯಚೂರು ಜಿಲ್ಲಾಡಳಿತ ಅಕ್ರಮ ತಡೆಗೆ ತಂಡ ರಚಿಸಿ ಅಕ್ರಮ ತಡೆಗೆ ಮುಂದಾಗಿದ್ದರು. ಆದರೆ, ಇದುವರೆಗೆ ಸಂಪೂರ್ಣ ಅಕ್ರಮ ತಡೆಯಲು ಸಾಧ್ಯವಾಗಿಲ್ಲ. ಕಾಲುವೆ ವ್ಯಾಪ್ತಿಯಲ್ಲಿ ಈಗಲೂ ಪ್ರಭಾವಿಗಳು ಅಕ್ರಮ ಪೈಪ್ ಲೈನ್ ಮೂಲಕ ನೀರು ಕಳ್ಳತನ ಮಾಡುತ್ತಿದ್ದಾರೆ ಎಂದು ದೂರಿದರು.

ಜಿಲ್ಲಾಧಿಕಾರಿಗಳ ಕಾರ್ಯ ಕೇವಲ ಆದೇಶಕ್ಕೆ ಸೀಮಿತವಾಗಿದೆ, ನೆಪ ಮಾತ್ರಕ್ಕೆ ಒಂದೆರಡು ಪೈಪ್ ಗಳನ್ನು ಕಿತ್ತು ವಿದ್ಯುತ್ ಕಡಿತಗೊಳಿಸಿದೆ. ಕೊಪ್ಪಳ ಜಿಲ್ಲಾಧಿಕಾರಿ ಅವರಿಗೆ ಭೇಟಿ ನೀಡಿ ಅಕ್ರಮ ನೀರಾವರಿ ತಡೆಗೆ ಮನವರಿಕೆ ಮಾಡಿದ್ದು ಶೀಘ್ರವೇ ಅಧಿಕಾರಿಗಳೊಂದಿಗೆ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ ನೀರಾವರಿ ಇಲಾಖೆಯ ಅಧಿಕಾರಿಗಳು ಅಕ್ರಮ ತಡೆಗೆ ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದ್ದಾರೆ.

ADVERTISEMENT

ರಾಘವೇಂದ್ರ ಕುಷ್ಟಗಿ ಅವರು ಮಾತನಾಡಿ, ಅಕ್ರಮ ನೀರಾವರಿ ತಡೆಗೆ ಜಿಲ್ಲೆಯ ಶಾಸಕರಿಗೆ ಮನವರಿಕೆ ಮಾಡಿದ್ದು ಈ ಹೋರಾಟಕ್ಕೆ ಬೆಂಬಲಿಸುವ ಭರವಸೆ ನೀಡಿದ್ದಾರೆ. ಕೊಪ್ಪಳ ಜಿಲ್ಲೆಯ ಕೆಲ ರಾಜಕಾರಣಿಗಳು ಅಕ್ರಮ ನೀರಾವರಿಗೆ ಬೆಂಬಲಿಸುತ್ತಿದ್ದಾರೆ. ಆಗಸ್ಟ್ 6 ರೊಳಗೆ ಅಕ್ರಮ ನೀರಾವರಿಗೆ ತೆರವುಗೊಳಿಸದಿದ್ದಲ್ಲಿ ಅಕ್ರಮ ನೀರಾವರಿ ಪಡೆಯುತ್ತಿರುವವರ ಪೈಪ್ ಗಳನ್ನು ಕಿತ್ತು ಹಾಕಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜೆ. ಶರಣಪ್ಪ ಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತೇಶ ಪಾಟೀಲ್ ಅತ್ತನೂರು, ನಾಗನಗೌಡ ಹರವಿ, ವೀರನಗೌಡ, ಕರಿಯಪ್ಪ ಅಚ್ಚೊಳ್ಳಿ, ಕೆ.ಜಿ ವೀರೇಶ, ವೈ. ನರಸಪ್ಪ, ಸುಧೀಂದ್ರ ಜಾಗಿರದಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.