ADVERTISEMENT

ಟ್ರಂಪ್ ಭೇಟಿ ವಿರೋಧಿಸಿ ಕೆಪಿಆರ್‌ಎಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 14:07 IST
Last Updated 24 ಫೆಬ್ರುವರಿ 2020, 14:07 IST
ಭಾರತಕ್ಕೆ ಅಮೆರಿಕ ಅಧ್ಯಕ್ಷ ಭೇಟಿ ವಿರೋಧಿಸಿ ರಾಯಚೂರಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದಿಂದ ಪ್ರತಿಕೃತಿ ಸಹಿಸಿ ಸೋಮವಾರ ಪ್ರತಿಭಟನೆ ನಡೆಸಲಾಯಿತು
ಭಾರತಕ್ಕೆ ಅಮೆರಿಕ ಅಧ್ಯಕ್ಷ ಭೇಟಿ ವಿರೋಧಿಸಿ ರಾಯಚೂರಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದಿಂದ ಪ್ರತಿಕೃತಿ ಸಹಿಸಿ ಸೋಮವಾರ ಪ್ರತಿಭಟನೆ ನಡೆಸಲಾಯಿತು   

ರಾಯಚೂರು: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತ ಪ್ರವಾಸ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದಿಂದ ಪ್ರಧಾನಿ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಭಾವಚಿತ್ರ ದಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನರೇಂದ್ರ ಮೋದಿ ಅವರು ಫೆಬ್ರುವರಿ 24, 25 ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭಾರತಕ್ಕೆ ಅಹ್ವಾನಿಸಿ ಹೈನುಗಾರಿಕೆ ಮತ್ತು ಕುಕ್ಕುಟ ಉದ್ಯಮದಲ್ಲಿ ಮುಕ್ತವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಲು ಮುಂದಾಗಿದ್ದಾರೆ. ಈ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆಂದು ಎಂದು ದೂರಿದರು.

ಈ ಒಪ್ಪಂದ ಜಾರಿಯಾದರೆ ಭಾರತಕ್ಕೆ ವಾರ್ಷಿಕವಾಗಿ ಅಂದಾಜು ₹ 42,000 ಕೋಟಿ ಕೋಳಿ ಉತ್ಪನ್ನಗಳು ಟರ್ಕಿ ಮತ್ತಿತರೆ ಕೃಷಿ ಉತ್ಪನ್ನ ವಸ್ತುಗಳು ಆಮದಾಗುತ್ತವೆ. ಇದರಿಂದ ಹೈನುಗಾರಿಕೆ, ಕುಕ್ಕಟ ಉದ್ಯಮದಲ್ಲಿ ತೊಡಗಿರುವ ಕಾರ್ಮಿಕರ ಜೀವನೋಪಾಯಕ್ಕೆ ಕೊಡಲಿಪೆಟ್ಟು ಬಿಳಲಿದೆ. ಸೇಬು, ಚೆರಿ, ಬಾದಾಮಿ ಸೋಯಾಬೀನ್, ಗೋಧಿ, ಜೋಳ ಮೊದಲಾದ ಹಣ್ಣು ಕಾಳುಗಳ ಮೇಲಿನ ಆಮದು ತೆರಿಗೆ ಶೇ 100 ರಿಂದ ಶೇ 10ಕ್ಕಿಂತ ಕಡಿಮೆ ಮಾಡಿದರೆ, ಭಾರತ ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಆರೋಪಿಸಿದರು.

ADVERTISEMENT

ಸರ್ಕಾರ ಈ ಹಿಂದೆ ಅರ್‌ಸಿಪಿ ಒಪ್ಪಂದಕ್ಕೆ ಸಹಿ ಹಾಕಲು ನಿರ್ಧರಿಸಿದಾಗ ದೇಶದಾದ್ಯಂತ ವಿರೋಧ ವ್ಯಕ್ತವಾಯಿತು. ಆನಂತರ ಸಹಿ ಹಾಕಿಲ್ಲ. ಸರ್ಕಾರ ಈ ಒಪ್ಪಂದಕ್ಕೆ ಸಹಿ ಹಾಕಿದರೆ ಅದಕ್ಕಿಂತ ಅಘಾತಕಾರಿ ಪರಿಣಾಮ ಬೀರಲಿದೆ. ಸುಮಾರು 10 ಕೋಟಿ ರೈತರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಅನೇಕ ವರ್ಷಗಳಿಂದ ಸಹಕಾರಿ ಜಾಲವನ್ನು ಕಟ್ಟಿ ಬೆಳೆಸಿದ ಹೈನುಗಾರಿಕೆ ಉದ್ಯಮದಲ್ಲಿ ಹಾಲಿನ ಬೆಲೆ ಶೇ 71 ರಷ್ಟು ಹಣ ರೈತಾಪಿ ಕುಟುಂಬಕ್ಕೆ ವಾಪಸ್ ಅಗುತ್ತಿದೆ. ಅಮೆರಿಕದ ಬೇಡಿಕೆಯಂತೆ ಹೈನುಗಾರಿಕೆ ಉತ್ಪನ್ನಗಳ ಮೇಲಿನ ಅಮದು ಸುಂಕವನ್ನು ಶೇ 64 ತೆರಿಗೆ ಕಡಿತಗೊಳಿಸಿದರೆ ಭಾರತದ ಹೈನುಗಾರಿಕೆ ಆಂತರಿಕವಾಗಿ ನೆಲಕಚ್ಚುತ್ತದೆ ಎಂದು ದೂರಿದರು.

ದೇಶದಲ್ಲಿ ಶೇ 48 ದಶಲಕ್ಷ ಜನರಿಗೆ ಕುಕ್ಕುಟ ಉದ್ಯಮ ಆಸರೆಯಾಗಿದೆ. ಸಂಘಟಿತ ಹಾಗೂ ಅಸಂಘಟಿತ ರೂಪದಲ್ಲಿ ಸುಮಾರು ₹80,000 ಕೋಟಿ ಅಮೆರಿಕದಿಂದ ಕಡಿಮೆ ದರದ ಕುಕ್ಕುಟ ಉತ್ಪನ್ನ ಭಾರತ ಪ್ರವೇಶಿಸುತ್ತದೆ. ಇದು ಮರಣ ಶಾಸನವಾಗಿದೆ. ಅಮೆರಿಕದ ಒತ್ತಡಕ್ಕೆ ಒಳಗಾಗಿ ಒಪ್ಪಂದಕ್ಕೆ ಸಹಿ ಹಾಕಿದರೆ ಶೇ 85 ರಷ್ಟು ಸಣ್ಣ ಮತ್ತು ಮಧ್ಯಮ ವರ್ಗದ ರೈತರು, ಕೃಷಿ ಕೂಲಿಕಾರ್ಮಿಕರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಚುನಾವಣೆ ವರ್ಷದಲ್ಲಿರುವ ಟ್ರಂಪ್ ತಮ್ಮ ದೇಶದ ಕೃಷಿ ಕ್ಷೇತ್ರವನ್ನು ಉತ್ತೇಜಿಸಲು ಕೃಷಿ ಉತ್ಪನ್ನಗಳ ರಫ್ತಿಗೆ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಭಾರತ ದೇಶದ ರೈತರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಒಪ್ಪಂದಕ್ಕೆ ಸಹಿ ಹಾಕದೇ ನಿರ್ಧಾರ ಹಿಂಪಡೆಯಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಪ್ರಧಾನಮಂತ್ರಿಗೆ ಮನವಿ ರವಾನಿಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ್, ಈ.ರಂಗನಗೌಡ, ಕರಿಯಪ್ಪ ಅಚ್ಚೊಳ್ಳಿ, ಶರಣಬಸವ, ದೇವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.