ಮಾನ್ವಿ: ಪಟ್ಟಣದಲ್ಲಿ ಕಳಪೆ ಗುಣಮಟ್ಟದ ಆಹಾರ ಸಾಮಾಗ್ರಿಗಳಿಗೆ ರಸಾಯನಿಕಗಳನ್ನು ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದ ಅಕ್ರಮ ಜಾಲವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಪಟ್ಟಣದ ಇಸ್ಲಾಂ ನಗರದ ಖಾಲಿ ನಿವೇಶನದಲ್ಲಿ ಅನೇಕ ದಿನಗಳಿಂದ ಅಕ್ರಮವಾಗಿ ಆಹಾರ ಪದಾರ್ಥಗಳ ಕಲಬೆರಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಗುರುವಾರ ತಾಲ್ಲೂಕು ಆಹಾರ ನಿರೀಕ್ಷಕ ದೇವರಾಜ, ಆಹಾರ ಸುರಕ್ಷತಾ ಅಧಿಕಾರಿ ಗುರುರಾಜ ಹಾಗೂ ಪುರಸಭೆಯ ಆರೋಗ್ಯ ನಿರೀಕ್ಷಕ ಮಹೇಶಕುಮಾರ ದಿಢೀರ್ ದಾಳಿ ನಡೆಸಿದರು. ಅಧಿಕಾರಿಗಳ ದಾಳಿ ಸುಳಿವು ಪಡೆದಿದ್ದ ಅಕ್ರಮ ದಂಧೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.
ದಾಳಿ ನಡೆದ ಸ್ಥಳದಲ್ಲಿ ಕಲಬೆರಕೆ ಅರಶಿಣ ಕಡಲೆ ಕಾಳು, ಕೆಂಪು ಕಡಲೆ ಕಾಳು, ದನಿಯಾ ಕಾಳು, ಮೆಣುಸು, ನೀಲಗೀರಿ ಎಲೆ , ಕೆಂಪು ಕೊಬ್ಬರಿ, ಮಸಾಲೆ ಚಕ್ಕೆ ಸೇರಿದಂತೆ ಅಂದಾಜು ₹4ಲಕ್ಷ ಮೌಲ್ಯದ ಒಟ್ಟು 486 ಕೆ.ಜಿ ಕಲಬೆರಕೆ ಆಹಾರ ಪದಾರ್ಥ ಹಾಗೂ ರಸಾಯನಿಕ ಬಣ್ಣ ವಶ ಪಡಿಸಿಕೊಳ್ಳಲಾಗಿದೆ.
ಆಹಾರ ಸುರಕ್ಷತಾ ಅಧಿಕಾರಿ ಗುರುರಾಜ ಮಾತನಾಡಿ, ‘ಕಳಪೆ ಮತ್ತು ಹಾಳಾದ ಆಹಾರ ಪದಾರ್ಥಗಳಿಗೆ ಕೃತಕ ರಾಸಾಯನಿಕ ಬಣ್ಣವನ್ನು ಬಳಸಿ ಗ್ರಾಹಕರನ್ನು ಆಕರ್ಷಿಸಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಇಂತಹ ಆಹಾರ ಪದಾರ್ಥಗಳನ್ನು ಮಸಾಲೆ ಸಾಮಾಗ್ರಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಈ ರಾಸಾಯನಿಕ ಮಿಶ್ರಿತ ಆಹಾರ ಪದಾರ್ಥಗಳ ಬಳಕೆ ಹಾಗೂ ಸೇವನೆ ಆರೋಗ್ಯದ ಮೇಲೆ ಗಂಭಿರವಾದ ಪರಿಣಾಮ ಬೀರುತ್ತದೆ’ ಎಂದು ತಿಳಿಸಿದರು.
ಆಹಾರ ನಿರೀಕ್ಷಕ ದೇವರಾಜ ಮಾತನಾಡಿ, ‘ವಶಕ್ಕೆ ಪಡೆದ ಆಹಾರ ಪದಾರ್ಥಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ನಿವೇಶನದ ಮಾಲೀಕರ ವಿಚಾರಣೆ ಮೂಲಕ ಈ ಅಕ್ರಮ ದಂಧೆಯಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.