ADVERTISEMENT

ಮಾನ್ವಿ: ಹುತಾತ್ಮ ಅಣ್ಣನ ಪ್ರೇರಣೆ- ರಾಜಕೀಯದಿಂದ ಸಿಆರ್‌ಪಿಎಫ್ ಸೇವೆಗೆ

ಬಸವರಾಜ ಬೋಗಾವತಿ
Published 21 ಆಗಸ್ಟ್ 2021, 13:57 IST
Last Updated 21 ಆಗಸ್ಟ್ 2021, 13:57 IST
ಎ.ಶಿವಕುಮಾರ ನಾಯಕ
ಎ.ಶಿವಕುಮಾರ ನಾಯಕ   

ಮಾನ್ವಿ:ತಾಲ್ಲೂಕಿನ ಸಾದಾಪುರ ಗ್ರಾಮ ಪಂಚಾಯಿತಿಗೆ 2010ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಎ.ಶಿವಕುಮಾರ ನಾಯಕ ಅವರು, ಅವಧಿ ಪೂರ್ಣವಾದ ಬಳಿಕ ಜನಸೇವೆ ಬಿಟ್ಟು, ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್)ಗೆ ಸೇರಿಕೊಂಡಿದ್ದಾರೆ.

2015 ರಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆಗೆ ಸೇರಿಕೊಂಡಿರುವ ಇವರಿಗೆ ಮುಖ್ಯ ಪ್ರೇರಣೆ ಅವರ ಹಿರಿಯ ಸಹೋದರ ಮಂಜುನಾಥ ನಾಯಕ. ಗಡಿಯಲ್ಲಿ ಸಿಆರ್‌ಪಿಎಫ್‌ ಸೇವೆಯಲ್ಲಿದ್ದ ಮಂಜುನಾಥ ಅವರು2008ರಲ್ಲಿ ಮಣಿಪುರದಲ್ಲಿ ಗಸ್ತು ಕಾರ್ಯಾಚರಣೆಯಲ್ಲಿದ್ದಾಗ ಉಗ್ರರ ಗುಂಡಿಗೆ ಹುತಾತ್ಮರಾದರು. ಅಣ್ಣನ ಮಾರ್ಗದರ್ಶನದಂತೆ ದೇಶ ಸೇವೆಗಾಗಿ ಸಿಆರ್‌ಪಿಎಫ್‌ ಸೇರುವುದಕ್ಕೆ ಶಿವಕುಮಾರ್‌ ನಿಶ್ಚಯಿಸಿದ್ದರು.

ರಾಜಕೀಯದಲ್ಲಿ ಬೆಳೆಯುವ ಅವಕಾಶಗಳಿದ್ದವು. ಆದರೆ ಅಣ್ಣನ ದೇಶ ಸೇವೆಯಿಂದ ಪ್ರೇರಣೆಗೊಂಡಿದ್ದ ಶಿವಕುಮಾರ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಹಿರಿಯ ಸಹೋದರನ ಅಗಲಿಕೆಯಿಂದ ನೊಂದಿದ್ದ ಕುಟುಂಬದ ಸದಸ್ಯರ ಮನವೊಲಿಸಿ ಸೈನ್ಯಕ್ಕೆ ಸೇರುವಲ್ಲಿ ಶಿವಕುಮಾರ ಯಶಸ್ವಿಯಾಗಿದ್ದಾರೆ.

ADVERTISEMENT

ಬೆಂಗಳೂರು, ಉತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸಿ ಈಗ ಹೈದರಾಬಾದ್‌ ಸಿಆರ್‌ಪಿಎಫ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಜಾ ದಿನಗಳಲ್ಲಿ ಸ್ವಗ್ರಾಮಕ್ಕೆ ಬಂದಾಗಲೆಲ್ಲಾ ಮಾನ್ವಿ ಪಟ್ಟಣದಲ್ಲಿರುವ ವೀರಯೋಧ ಮಂಜುನಾಥ ನಾಯಕ ಅವರ ಪುತ್ಥಳಿ ಸ್ಥಳವನ್ನು ಸ್ವಚ್ಛಗೊಳಿಸುತ್ತಾರೆ.

ಶಿವಕುಮಾರ ಅವರ ದೇಶಪ್ರೇಮದ ಬಗ್ಗೆ ಗ್ರಾಮಸ್ಥರು ಹಾಗೂ ತಾಲ್ಲೂಕಿನ ಸಂಘ ಸಂಸ್ಥೆಗಳ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪುಟ್ಟ ಗ್ರಾಮವಾದರೂ ಸಾದಾಪುರದಲ್ಲಿ ಇದುವರೆಗೆ ಒಟ್ಟು ಆರು ಜನರು ಸೈನಿಕರಾಗಿ ದೇಶಸೇವೆಗೆ ಆಯ್ಕೆಯಾಗಿರುವುದು ಗಮನಾರ್ಹ.

***

ದೇಶದ ಯೋಧನಾಗಿ ಸೇವೆ ಸಲ್ಲಿಸಲು ನನಗೆ ಹೆಮ್ಮೆ ಇದೆ. ನನ್ನ ಸಹೋದರ ಹುತಾತ್ಮ ವೀರಯೋಧ ಮಂಜುನಾಥ ನಾಯಕ ನನಗೆ ಮುಖ್ಯ ಪ್ರೇರಣೆ.

- ಎ.ಶಿವಕುಮಾರ ನಾಯಕ, ಸಿಆರ್‌ಪಿಎಫ್ ಯೋಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.