ADVERTISEMENT

ಸಿಂಧನೂರು | ಜನಚಳವಳಿಗೆ ಗದ್ದರ್ ಹಾಡುಗಳೇ ಶಕ್ತಿ: ಚಂದ್ರಶೇಖರ ಗೊರಬಾಳ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2023, 16:34 IST
Last Updated 8 ಆಗಸ್ಟ್ 2023, 16:34 IST
ಸಿಂಧನೂರಿನ ಶ್ರಮಿಕ ಭವನದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಸಂಜೆ ಕ್ರಾಂತಿಕಾರಿ ಕವಿ ಗದ್ದರ್ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಯಿತು
ಸಿಂಧನೂರಿನ ಶ್ರಮಿಕ ಭವನದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಸಂಜೆ ಕ್ರಾಂತಿಕಾರಿ ಕವಿ ಗದ್ದರ್ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಯಿತು   

ಸಿಂಧನೂರು: ಜನರ ತಲ್ಲಣಗಳು, ಆಳುವ ಪ್ರಭುತ್ವಗಳ ಧೋರಣೆಗಳು, ಬಂಡವಾಳಶಾಹಿಗಳ ಕುತಂತ್ರಗಳ ಬಗ್ಗೆಯೇ ಕ್ರಾಂತಿಕಾರಿ ಸಾಹಿತ್ಯ ರಚಿಸಿ ಹಾಡುವ ಮೂಲಕ ಜನರಿಗೆ ಜಾಗೃತಪ್ರಜ್ಞೆ ಮೂಡಿಸಿ, ಜನಚಳವಳಿಗೆ ಜೀವ ತುಂಬಿದ ಜನಕವಿಯೇ ಗದ್ದರ್. ಅವರ ಕ್ರಾಂತಿಕಾರಿ ಹಾಡುಗಳೇ ಚಳವಳಿಗೆ ಶಕ್ತಿಯಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ ಹೇಳಿದರು.

ಸ್ಥಳೀಯ ಶ್ರಮಿಕ ಭವನದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಸಂಜೆ ನಡೆದ ಕ್ರಾಂತಿಕಾರಿ, ಹೋರಾಟಗಾರ ಗದ್ದರ್ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

‘ಗದ್ದರ್ ಅವರು ಬರಹಗಾರ, ಹಾಡುಗಾರ, ನೃತ್ಯಗಾರ, ಆಶುಕವಿ ಆಗಿದ್ದರು. ದೇಶದ ಯಾವ ಮೂಲೆಯಲ್ಲಿ ಏನೇ ಘಟನೆಗಳಾದರೂ ಅಲ್ಲಿಗೆ ಹೋಗಿ ಸಾಹಿತ್ಯ ಬರೆದು ಹಾಡಿ ಪ್ರತಿರೋಧ ಒಡ್ಡುತ್ತಿದ್ದರು. ಈ ಮೂಲಕ ಸಾಂಸ್ಕೃತಿಕ ಹೊಸ ಪರಂಪರೆಯನ್ನು ಹುಟ್ಟುಹಾಕಿದ್ದರು. ನೀಲಿ-ಕೆಂಪು ಬಾವುಟಗಳು ಒಂದಾಗಬೇಕೆನ್ನುವ ಆಶಯದಿಂದಲೇ ಜೈಭೀಮ್ ಲಾಲ್ ಸಲಾಂ ಘೋಷಣೆ ಕೂಗಿದ್ದರು. ದೊಡ್ಡ ಮಟ್ಟದಲ್ಲಿ ಚಳವಳಿ ಕಟ್ಟಿದ ಅವರು ಇತ್ತೀಚಿನ ದಿನಗಳಲ್ಲಿ ಚಳವಳಿಯ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡ ಬಗ್ಗೆ ವಿಮರ್ಶೆ ಮಾಡಲೇಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಕೆಆರ್‌ಎಸ್ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ್ ಮಾತನಾಡಿ ‘ಪ್ರಜಾ ಸಾಂಸ್ಕೃತಿಕ ನಾಯಕ ಗದ್ದರ್ ಅವರ ಅಗಲಿಕೆಯಿಂದ ಜನಚಳವಳಿಗೆ ತುಂಬಲಾರದ ನಷ್ಟವಾಗಿದೆ. ದುಡಿಯುವ ವರ್ಗದ ಸಾಂಸ್ಕೃತಿಕ ಸೇನಾನಿ ಗದ್ದರ್ ಆಗಿದ್ದರು. ಆದರೆ, ಪ್ರಭುತ್ವಗಳು ಹೋರಾಟಗಾರರನ್ನು ಹಿಮ್ಮುಖ ಮಾಡುವಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತಿವೆ. ಇದು ಗದ್ದರ್ ಜೀವನದಲ್ಲೂ ಆಗಿದೆ’ ಎಂದರು.

ಸಮುದಾಯ ಸಂಘಟನೆ ರಾಜ್ಯ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಉಪನ್ಯಾಸಕರಾದ ಬಸವರಾಜ ಪಿ.ನಾಯಕ, ರಮೇಶ ಹಲಗಿ, ಎಐಟಿಯುಸಿ ಮುಖಂಡ ವೆಂಕನಗೌಡ ಗದ್ರಟಗಿ, ಪತ್ರಕರ್ತ ಚಂದ್ರಶೇಖರ ಯರದಿಹಾಳ, ಕೋಮು ಸೌಹಾರ್ದ ವೇದಿಕೆಯ ಸಂಚಾಲಕ ಅಬ್ದುಲ್ ಸಮ್ಮದ್ ಚೌದ್ರಿ, ಪ್ರಗತಿಪರ ಒಕ್ಕೂಟದ ಹಾಜಿಸಾಬ ಆಯನೂರು, ಪಾಂಡಪ್ಪ ಆಯನೂರು ಅವರು ಗದ್ದರ್ ಅವರ ಹೋರಾಟ, ಸಾಹಿತ್ಯ, ಹಾಡುಗಳ ಕುರಿತು ಮಾತನಾಡಿದರು. ಒಕ್ಕೂಟದ ಶಂಕರ್ ಗುರಿಕಾರ್, ಮಂಜುನಾಥ ಗಾಂಧಿನಗರ, ನಾಗರಾಜ್ ಪೂಜಾರ್, ಶಂಕರ್ ವಾಲಿಕಾರ್, ಬಸವರಾಜ ಹಳ್ಳಿ ಹಸಮಕಲ್, ಶರಣಬಸವ, ಹನುಮೇಶ ಗುಡದೂರು, ನಾರಾಯಣ ಬೆಳಗುರ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.