ADVERTISEMENT

ಸಂಕ್ಷಿಪ್ತ ಗಣೋಶೋತ್ಸವಕ್ಕೆ ಆಗಿದೆ ಸಿದ್ಧತೆ

ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ತಡೆಗೆ ಮಾರ್ಗಸೂಚಿ ಪಾಲನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 16:50 IST
Last Updated 9 ಸೆಪ್ಟೆಂಬರ್ 2021, 16:50 IST
ಗಣೇಶ ಚತುರ್ಥಿ ಮುನ್ನಾದಿನ ಗುರುವಾರ ರಾಯಚೂರಿನ ಮಾರುಕಟ್ಟೆಯಲ್ಲಿ ಜನರು ಪೂಜಾ ಸಾಮಗ್ರಿಗಳನ್ನು ಖರೀದಿಸಿದರು
ಗಣೇಶ ಚತುರ್ಥಿ ಮುನ್ನಾದಿನ ಗುರುವಾರ ರಾಯಚೂರಿನ ಮಾರುಕಟ್ಟೆಯಲ್ಲಿ ಜನರು ಪೂಜಾ ಸಾಮಗ್ರಿಗಳನ್ನು ಖರೀದಿಸಿದರು   

ರಾಯಚೂರು: ಜಿಲ್ಲೆಯಾದ್ಯಂತ ಈ ವರ್ಷವೂ ಗಣೇಶೋತ್ಸವವನ್ನು ಸರಳ ಹಾಗೂ ಸಂಕ್ಷಿಪ್ತವಾಗಿ ಆಚರಿಸುವುದಕ್ಕೆ ಎಲ್ಲೆಡೆಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕೋವಿಡ್‌ ಸೋಂಕು ತಡೆಗಾಗಿ ಕ್ರಮ ಕೈಗೊಂಡಿರುವ ಜಿಲ್ಲಾಡಳಿತವು ಈಗಾಗಲೇ ಹಲವು ಸೂಚನೆಗಳನ್ನು ಸಾರ್ವಜನಿಕರಿಗೆ ನೀಡಿದೆ. ರಾಜ್ಯ ಸರ್ಕಾರವು ಸಾರ್ವಜನಿಕ ಉತ್ಸವಕ್ಕೆ ಆವಕಾಶ ಮಾಡಿದ್ದರೂ, ಹಲವಾರು ಕಟ್ಟಪಾಡುಗಳನ್ನು ವಿಧಿಸಲಾಗಿದೆ. ಅದೇ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳು ಜನಜಾಗೃತಿ ಮೂಡಿಸಿ, ಪರಿಸರಸ್ನೇಹಿ ಚಿಕ್ಕ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸಬೇಕು ಎಂದು ಮನವರಿಕೆ ಮಾಡಿಸುತ್ತಿವೆ. ಆಯಾ ತಾಲ್ಲೂಕು ತಹಶೀಲ್ದಾರರು ಹಾಗೂ ಪೊಲೀಸರು ಕೂಡಾ ಜಾಗೃತಿ ಮೂಡಿಸುತ್ತಿದ್ದಾರೆ.

ಪ್ರತಿ ಬಡಾವಣೆಯಲ್ಲೂ ಗಣೇಶೋತ್ಸವ ಆಚರಿಸುವುದಕ್ಕೆ ಮಿತ್ರ ಮಂಡಳಿಗಳು ಸಿದ್ಧತೆ ಮಾಡಿಕೊಂಡು ವೇದಿಕೆ ನಿರ್ಮಾಣ ಮಾಡಿರುವುದು ಗುರುವಾರ ಕಂಡುಬಂತು. ಆದರೆ ಈ ಹಿಂದೆ ಇದ್ದಂತೆ ಅದ್ಧೂರಿ ವೇದಿಕೆ ಬದಲಾಗಿ, ಚಿಕ್ಕದಾಗಿ ವೇದಿಕೆ ಸಿದ್ಧಪಡಿಸಿ, ಚಿಕ್ಕದಾದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತಿದೆ.

ADVERTISEMENT

ಮುಖ್ಯವಾಗಿ ಪ್ರತಿ ಬಡಾವಣೆಯಲ್ಲೂ ಗಮನ ಸೆಳೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆ ಮಾಡುವುದಕ್ಕೆ ಈ ವರ್ಷ ಬ್ರೇಕ್‌ ಹಾಕಲಾಗಿದೆ. ಗಣಪತಿ ಮೂರ್ತಿ ಪ್ರತಿಷ್ಠಾಪಿಸಿದ ವೇದಿಕೆಯ ಸುತ್ತಮುತ್ತ ಮಾತ್ರ ಭಕ್ತಿಗೀತೆಗಳು ಕೇಳಿಬರಲಿವೆ.

‘ಸತತ ಎರಡು ಬಾರಿ ಕೊರೊನಾ ಮಹಾಮಾರಿಯಿಂದ ಜನರೆಲ್ಲ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಧಾರ್ಮಿಕವಾಗಿ ಸಂಪ್ರದಾಯ ಪಾಲನೆಯನ್ನು ಮಾಡಿಕೊಂಡು ಹಬ್ಬ ಆಚರಿಸುತ್ತಿರುವುದು ಎಲ್ಲರಿಗೂ ಒಳ್ಳೆಯದು. ಪರಿಸರಸ್ನೇಹಿ ಗಣೇಶೋತ್ಸವ ಆಚರಿಸುವುದಕ್ಕೆ ಜನರು ಸಿದ್ಧವಾಗಿದ್ದರೂ, ಸಾಕಷ್ಟು ಪ್ರಮಾಣದಲ್ಲಿ ಮಣ್ಣಿನ ಗಣಪತಿಗಳು ಸಿಗುತ್ತಿಲ್ಲ’ ಎಂದು ಐಡಿಎಸ್‌ಎಂಟಿ ಬಡಾವಣೆಯ ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನಸ್ವಾಮಿ ಹೇಳಿದರು.

ಗಣೇಶೋತ್ಸವ ಮುನ್ನಾದಿನ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳನ್ನು ಖರೀದಿಸುವುದಕ್ಕೆ ಜನರು ಮುಗಿಬೀಳುತ್ತಿದ್ದರು. ಈ ವರ್ಷ ಸಂಜೆವರೆಗೂ ಮಾರುಕಟ್ಟೆ ಖಾಲಿಖಾಲಿಯಾಗಿತ್ತು. ಸಂಜೆ ಬಳಿಕ ಮಾರುಕಟ್ಟೆಯಲ್ಲಿ ಜನದಸಂದಣಿ ಏರ್ಪಟ್ಟಿತ್ತು. ಆದರೆ ಸಂಪ್ರದಾಯಕ್ಕಾಗಿ ಕೆಲವೇ ಪೂಜಾ ಸಾಮಗ್ರಿಗಳನ್ನು ಜನರು ಖರೀದಿಸುತ್ತಿರುವುದು ಕಂಡುಬಂತು.

ಹೂವು, ಹಣ್ಣು, ಬಾಳೆಗಿಡ, ವಿಳ್ಯೆದೆಲೆ, ಕಾಯಿ, ಕರ್ಪೂರ ಹಾಗೂ ಉದುಬತ್ತಿ ಖರೀದಿಯೆ ಹೆಚ್ಚಾಗಿತ್ತು. ಗಣಪತಿ ಅಲಂಕಾರಕ್ಕಾಗಿ ಕೆಲವು ಸಾಮಗ್ರಿಗಳ ಖರೀದಿಯೂ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.