ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮನೆ ಹಾಗೂ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ಐದನೇ ದಿನದಂದು ನದಿ, ಕೆರೆ ಹಾಗೂ ಬಾವಿಗಳಲ್ಲಿ ವಿಸರ್ಜನೆ ಮಾಡಲಾಯಿತು.
ಕೃಷ್ಣಾ ಹಾಗೂ ತುಂಗಭದ್ರಾ ನದಿ ದಂಡೆ ಗ್ರಾಮಗಳ ಗ್ರಾಮಸ್ಥರು ಸಂಜೆ ವೇಳೆಗೆ ಗಣಪತಿಗೆ ವಿದಾಯ ಹೇಳಿದರು. ನದಿಗಳಿಂದ ದೂರ ಇರುವವರು ರಾತ್ರಿ 10 ಗಂಟೆವರೆಗೂ ಗಣಪತಿ ಮೂರ್ತಿಗಳ ವಿಸರ್ಜನೆ ಮಾಡಿದರು.
ಏಕದಂತನ ಭಕ್ತರು ಕಾರು, ಜೀಪು, ಆಟೊ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಗಣಪತಿ ಮೂರ್ತಿಗಳನ್ನು ಇಟ್ಟು ಜಯಘೋಷ ಮೊಳಗಿಸುತ್ತ ಮೆರವಣಿಗೆಯಲ್ಲಿ ಸಾಗಿದರು. ಕಾಯಿ ಕರ್ಪೂರ ಬೆಳಗಿದ ನಂತರ ನೈವೇದ್ಯ ಸರ್ಮರ್ಪಿಸಿ ಮುಂದಿನ ವರ್ಷ ಬೇಗ ಬರುವಂತೆ ಏಕದಂತನ ಬಳಿ ಭಕ್ತಿಯಿಂದ ಬೇಡಿಕೊಂಡರು.
ಯುವಕರು ಹಾಗೂ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಎಲ್ಲೆಡೆ ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಭದ್ರತೆ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.
ಮಹಾ ಅನ್ನಪ್ರಸಾದ ವ್ಯವಸ್ಥೆ: ನಗರದ ಶ್ರೀರಾಮನಗರ ಕಾಲೊನಿಯಲ್ಲಿ ಕೊದಂಡರಾಮ ಗಜಾನನ ಯುವಕ ಮಂಡಳಿಯಿಂದ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದ್ದು, 9 ದಿನಗಳವರೆಗೆ ನಿತ್ಯ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಭಾನುವಾರ ಗಣೇಶ ಭಕ್ತರಿಗಾಗಿ ಮಹಾ ಅನ್ನಪ್ರಸಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಶ್ರೀರಾಮನಗರ ಕಾಲೊನಿ, ಪ್ರಶಾಂತ ಕಾಲೊನಿ, ಮಾರುತಿ ನಗರ ಸೇರಿ ವಿವಿಧ ಬಡಾವಣೆಯ ನೂರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಶ್ವಮೇಧ ಯಾಗದ ರಥದ ವಿನ್ಯಾಸದ ಕಲಾಕೃತಿಯ ಸೆಟ್ ನಿರ್ಮಾಣ ಮಾಡಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದ್ದು ನೋಡುಗರನ್ನು ಆಕರ್ಷಿಸುತ್ತಿದೆ.
ಮಹಾ ಅನ್ನಪ್ರಸಾದ ಕಾರ್ಯಕ್ರಮವನ್ನ ಶ್ರೀಕೊದಂಡರಾಮ ಗಜಾನನ ಯುವಕ ಮಂಡಳಿಯ ಸದಸ್ಯರಾದ ಎ.ಕೆ.ವೀರೇಶ, ಸಂಜೀವ ನಾಯಕ, ಸಂಜೀವ, ಸಂತೋಷ, ಜಗದೀಶ, ವಿನೋದ, ಸುದೀಪ, ಸಾಯಿಕುಮಾರ, ಬಸವರಾಜ, ಅಜಿತ ಸೇರಿದಂತೆ ಹಲವಾರು ಯುವಕರು ಯಶಸ್ವಿಯಾಗಿ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.