
ಹಟ್ಟಿ ಚಿನ್ನದ ಗಣಿ: ಗೌರಿ ಹುಣ್ಣಿಮೆ ಬಂತೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಸಂಭ್ರಮ ಮನೆ ಮಾಡುತ್ತದೆ.
ಕೆಲ ಮನೆಗಳಲ್ಲಿ ಮಾತ್ರ ಪ್ರತಿಷ್ಠಾಪಿಸುವ ಗೌರಿ ವಿಗ್ರಹಕ್ಕೆ ಗೌರಿ ಹುಣ್ಣುಮೆಯ ರಾತ್ರಿಯಂದು ಮಹಿಳೆಯರು ಸಕ್ಕರೆ ಗೊಂಬೆಗಳಿಂದ ಆರತಿ ಬೆಳಗುತ್ತಾರೆ. ಬಳಿಕ ಕುಟುಂಬದ ಸದಸ್ಯರು, ನೆರೆ ಹೊರೆಯವರಿಗೆ ಆರತಿ ಬೆಳಗುವ ಸಂಪ್ರದಾಯ ಇದೆ.
ಸಕ್ಕರೆ ಗೊಂಬೆಗಳಿಲ್ಲದಿದ್ದರೆ ಗೌರಿ ಹುಣ್ಣಿಮೆ ಆಚರಣೆ ಅಪೂರ್ಣ. ಅನೇಕ ಕುಟುಂಬಗಳು ತಿಂಗಳ ಮೊದಲೇ ಸಕ್ಕರೆ ಗೊಂಬೆಗಳ ತಯಾರಿಕೆಯಲ್ಲಿ ತೊಡಗಿ ಮಾರಾಟ ಮಾಡಲು ಅಣಿಯಾಗಿವೆ.
ಸಕ್ಕರೆ ಗೊಂಬೆ ತಯಾರಿಕೆ ಒಂದು ಕಲೆಯಾಗಿದೆ. ಶುದ್ಧ ಸಕ್ಕರೆ ಪ್ರಮಾಣಕ್ಕೆ ತಕ್ಕಂತೆ ನೀರು, ನಿಂಬೆರಸ, ಹಾಲು, ಏಲಕ್ಕಿ ಹಾಕಿ ಒಲೆಯ ಮೇಲೆ ಹದ ಬರುವ ರೀತಿ ಕಾಯಿಸಲಾಗುತ್ತದೆ. ಆ ಬಳಿಕ ಹದವನ್ನು ಗೊಂಬೆ ತಯಾರಿಕೆಯ ಕಟ್ಟಿಗೆ ಅಚ್ಚುಗಳಿಗೆ ಹಾಕಿದಾಗ ಕೆಲವೇ ಸಮಯದಲ್ಲಿ ಬಗೆ ಬಗೆಯ ಗೊಂಬೆಗಳು ಸಿದ್ಧವಾಗುತ್ತವೆ.
ಜನರ ಭಕ್ತಿ ಭಾವಗಳಿಗೆ ತಕ್ಕಂತೆ ಶಿವ, ಪಾರ್ವತಿ, ಒಂಟೆ, ಆನೆ, ರಥ, ನವಿಲು, ಅರ್ಜುನನ ಬಿಲ್ಲು, ಮಂಟಪ, ಆಂಜನೇಯ, ವಿವಿಧ ಪಶುಪಕ್ಷಿಗಳು ಸಕ್ಕರೆಯಲ್ಲಿ ಅರಳುತ್ತವೆ.
ಹೊಸದಾಗಿ ಮದುವೆ ನಿಶ್ಚಯಗೊಂಡ ವರನ ಕಡೆಯವರು ವಧುವಿನ ಮನೆಗೆ ಗೌರಿ ಹುಣ್ಣಿಮೆಯಂದು ದಂಡಿನ ಜೊತೆಗೆ ಸಕ್ಕರೆ ಗೊಂಬೆಗಳನ್ನು ತೆಗೆದುಕೊಂಡು ಹೋಗುತ್ತಾರೆ.
ಮಾರುಕಟ್ಟೆಗೆ ಸಕ್ಕರೆ ಆರತಿಗಳು ಲಗ್ಗೆ ಇಟ್ಟಿವೆ. ಸಕ್ಕರೆ ಗೊಂಬೆಯ ಆರತಿಗಳು ಕೆ.ಜಿಗೆ ₹80 ರಿಂದ ₹120. ದಂಡಿ ಒಂದಕ್ಕೆ ₹50 ಗೆ ಮಾರಾಟ ಮಾಡಲಾಗುತ್ತಿದೆ.
ಬೆಲೆ ಏರಿಕೆಯಿಂದ ಸಹಜವಾಗಿ ಗೊಂಬೆಗಳ ಬೆಲೆ ಹೆಚ್ಚಾಗಿದೆ. ಲಾಭಗಳಿಕೆಯ ಉದ್ದೇಶ ಕೈ ಬಿಟ್ಟು ಸಂಪ್ರದಾಯ ಪಾಲನೆಗೆ ಗೊಂಬೆ ತಯಾರಿಕೆಯಲ್ಲಿ ತೊಡಗಿರುವುದಾಗಿ ಹೇಳುತ್ತಾರೆ ಸಕ್ಕರೆ ಗೊಂಬೆ ತಯಾರಕರಾದ ಶರಣಪ್ಪ ಅವರು.
ಹಳೆ ಸಂಪ್ರದಾಯದ ಕುರಿತು ಇಂದಿನ ಪೀಳಿಗೆಗೆ ಅಷ್ಟೊಂದು ಮಾಹಿತಿ ಇಲ್ಲ. ಹಬ್ಬಗಳ ಕುರಿತು ಜನರಿಗೆ ಮಾಹಿತಿ ನೀಡುವುದು ಅಗತ್ಯ–ಅಂಬಣ್ಣ, ವ್ಯಾಪಾರಿ
ಪಟ್ಟಣದ ಜನರು ಸಕ್ಕರೆ ಆರತಿಗಳನ್ನು ಕೊಂಡುಕೊಳ್ಳುವುದು ಕಡಿಮೆ. ಗ್ರಾಮೀಣರು ಹೆಚ್ಚಾಗಿ ಖರೀದಿ ಮಾಡುತ್ತಾರೆ–ಗಂಗಮ್ಮ, ಸಕ್ಕರೆ ಆರತಿ ಮಾರಾಟಗಾರರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.