ADVERTISEMENT

ವಿದ್ಯುತ್ ದೂರುಗಳ ಶೀಘ್ರ ವಿಲೇವಾರಿಗೆ ಸೂಚನೆ

ವ್ಯವಸ್ಥಾಪಕ ನಿರ್ದೇಶಕ ಅಧ್ಯಕ್ಷತೆಯಲ್ಲಿ ಕುಂದು ಕೊರತೆ ಸಭೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 10:11 IST
Last Updated 28 ಡಿಸೆಂಬರ್ 2019, 10:11 IST
ರಾಯಚೂರಿನ ಜೆಸ್ಕಾಂ ವಿದ್ಯುತ್ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ.ಆರ್‌.ರಾಗಪ್ರಿಯಾ ಅಧ್ಯಕ್ಷತೆಯಲ್ಲಿ ಗ್ರಾಹಕರ ಕುಂದು ಕೊರತೆ ಸಭೆ ಶುಕ್ರವಾರ ನಡೆಯಿತು
ರಾಯಚೂರಿನ ಜೆಸ್ಕಾಂ ವಿದ್ಯುತ್ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ.ಆರ್‌.ರಾಗಪ್ರಿಯಾ ಅಧ್ಯಕ್ಷತೆಯಲ್ಲಿ ಗ್ರಾಹಕರ ಕುಂದು ಕೊರತೆ ಸಭೆ ಶುಕ್ರವಾರ ನಡೆಯಿತು   

ರಾಯಚೂರು: ವಿದ್ಯುತ್‌ಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಲ್ಲಿಸಿರುವ ದೂರುಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥ ಪಡಿಸಬೇಕು ಎಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ.ಆರ್.ರಾಗಪ್ರಿಯಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜೆಸ್ಕಾಂ ವಿದ್ಯುತ್ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಜೆಸ್ಕಾಂನ ಕಾರ್ಯ ಮತ್ತು ಪಾಲನ ವೃತ್ತದ ವತಿಯಿಂದಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ವ್ಯಾಪ್ತಿಯ ಗ್ರಾಹಕರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ವಾಪ್ತಿಯಲ್ಲಿ ವಿದ್ಯುತ್ ಸಂಬಂಧಿಸಿದ ದೂರುಗಳು ಬಂದಲ್ಲಿ ತಕ್ಷಣವೇ ಅಧಿಕಾರಿಗಳು ಸ್ಪಂದಿಸಬೇಕು. ರೈತರಿಗೆ ವಿದ್ಯುತ್ ಪೂರೈಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿಗದಿತ ಕಾಲಮಿತಿಯೊಳಗೆ ಪರಿಹರಿಸಬೇಕು ಎಂದು ಹೇಳಿದರು.

ADVERTISEMENT

ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಂಬಗಳು ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಹಾಕಬೇಕು. ವಿದ್ಯುತ್ ಪರಿವರ್ತಕಗಳು ಸುಟ್ಟುಹೋದಲ್ಲಿ 24 ಗಂಟೆಯೊಳಗೆ ಬದಲಿಸಿ ಹೊಸ ವಿದ್ಯುತ್ ಪರಿವರ್ತಕ ಅಳವಡಿಸಬೇಕು. ವಿದ್ಯುತ್ ತಂತಿಗಳು ಜೋತು ಬಿದ್ದಲ್ಲಿ ಸರಿಪಡಿಸಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೈತ ಮುಖಂಡ ಲಕ್ಷ್ಮಣಗೌಡ ಕಡಗಂದೊಡ್ಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪರಿವರ್ತಕಗಳ ಸುತ್ತ ತಂತಿ ಬೇಲಿ ನಿರ್ಮಿಸದೇ ಇರುವುದರಿಂದ ಹಲವು ಜಾನುವಾರುಗಳ ಸಾವು ಸಂಭವಿಸಿವೆ. ಕೂಡಲೇ ತಂತಿ ಬೇಲಿ ಹಾಕಬೇಕು. ವಿದ್ಯುತ್ ಪರಿವರ್ತಕಗಳು ಸುಟ್ಟುಹೋದಲ್ಲಿ ಶೀಘ್ರ ದುರಸ್ತಿಗೆ ಆಗದೇ ಇರುವುದರಿಂದ ಗ್ರಾಮಗಳ ಕತ್ತಲಲ್ಲಿ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಸಮಸ್ಯೆ ವಿವರಿಸಿದರು.

ಡಾ.ರಾಜ್‌ಕುಮಾರ ಅಭಿಮಾನಿಗಳ ಸಂಘದ ಗೌರವ ಅಧ್ಯಕ್ಷ ಎಂ.ಎನ್.ಮೈತ್ರಿಕರ್ ಮಾತನಾಡಿ, ನಗರದ ಹರಿಜನವಾಡದಲ್ಲಿ ಐದು ತಿಂಗಳಿನಿಂದ ಬೆಳಿಗ್ಗೆ 12 ಗಂಟೆಯವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಮಳೆಗಾಲದಲ್ಲಿ ಸ್ವಲ್ಪಗಾಳಿ ಬೀಸಿದರೆ ತಕ್ಷಣ ವಿದ್ಯುತ್ ಕಡಿತಗೊಳಿಸಿ, ನಂತರ ವಿದ್ಯುತ್ ಪೂರೈಕೆಯಾಗುವುದಿಲ್ಲ. ಅಧಿಕಾರಿಗಳು ದೂರವಾಣಿ ಕರೆ ಸ್ವೀಕರಿಸುವುದಿಲ್ಲ ಎಂದು ಆರೋಪಿಸಿದರು.

ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಡಾ.ರಾಗಪ್ರಿಯಾ ಮಾತನಾಡಿ, ರೈತರಿಗೆ ವಿದ್ಯುತ್ ತೊಂದರೆಯಾದಲ್ಲಿ ನಿರ್ಲಕ್ಷ್ಯವಹಿಸಬಾರದು. ಪರಿವರ್ತಕಗಳ ಸಮಸ್ಯೆ ಎದುರಾದರೆ, ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಪ್ರತಿದಿನ ಏಳು ತಾಸು ವಿದ್ಯುತ್ ಪೊರೈಕೆ ಮಾಡಬೇಕು. ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜೆಸ್ಕಾಂ ಮುಖ್ಯ ಎಂಜನಿಯರ್ ಆರ್.ಡಿ.ಚಂದ್ರಶೇಖರ್, ತಾಂತ್ರಿಕ ನಿರ್ದೇಶಕ ಜಯಕುಮಾರ್, ಎಂ.ರಾಜೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.