
ರಾತ್ರಿ ಚಳಿಯಲ್ಲೂ ನೂರಾರು ಭಕ್ತರು ಭಾಗಿ | ಗಮನ ಸೆಳೆದ ಕೃಷಿ ಉತ್ಪನ್ನ ಮಳಿಗೆಗಳು | ಭಕ್ತರಿಗೆ ರುಚಿ ರುಚಿ ಪ್ರಸಾದ ವ್ಯವಸ್ಥೆ
ಮಸ್ಕಿ: ‘ಕೃಷಿ ಕ್ಷೇತ್ರದ ಪ್ರಗತಿಗಾಗಿ ಚಿಂತನೆಗಳು, ಸಂಶೋಧನೆಗಳು ಹಾಗೂ ವಿಚಾರಗೋಷ್ಠಿಗಳು ನಿರಂತರವಾಗಿ ನಡೆಯಬೇಕು’ ಎಂದು ವಳಬಳ್ಳಾರಿಯ ಸುವರ್ಣಗಿರಿ ಮಠದ ಸಿದ್ದಲಿಂಗಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದ ಕೃಷಿಋಷಿ ಘನಮಠ ಶಿವಯೋಗಿಗಳ 146ನೇ ಪುಣ್ಯಸ್ಮರಣೋತ್ಸವ ಹಾಗೂ ಕೃಷಿ ಋಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಘನಮಠ ಶಿವಯೋಗಿಗಳು ರಚಿಸಿರುವ ಕೃಷಿ ಪ್ರದೀಪಿಕೆ ಎಂಬ ವೈಜ್ಞಾನಿಕ ಕೃಷಿ ಗ್ರಂಥ ಈ ನಾಡಿಗೆ ಅಮೂಲ್ಯ ಕೊಡುಗೆಯಾಗಿದೆ.
ಪ್ರಶಸ್ತಿ ಪ್ರದಾನ: ಆದರ್ಶ ಕೃಷಿಕರಾಗಿ ಗುರುತಿಸಿಕೊಂಡು, 200ಕ್ಕೂ ಹೆಚ್ಚು ಕೆರೆಗಳ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿ ರಾಜ್ಯಮಟ್ಟದಲ್ಲಿ ಹೆಸರು ಗಳಿಸಿರುವ ಯಲಬುರ್ಗಾ ತಾಲ್ಲೂಕಿನ ಕರಮುಡಿ ಗ್ರಾಮದ ಆನಂದ ಮಲ್ಲಿಗಿವಾಡ ಅವರಿಗೆ ಘನಮಠೇಶ್ವರ ಮಠದಿಂದ ಕೊಡುವ ‘ಕೃಷಿ ಋಷಿ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಗದುಗಿನ ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜ, ಘನಮಠದ ಪೀಠಾಧ್ಯಕ್ಷ ಗುರುಬಸವ ಸ್ವಾಮೀಜಿ, ವರರುದ್ರಮುನಿ ಸ್ವಾಮೀಜಿ, ಜರಟಗಿಯ ಮಹಾಂತ ಮಹಾಸ್ವಾಮಿಗಳು ಸೇರಿದಂತೆ ಅನೇಕ ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಅನವರಿ, ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಕೊಡಿಹಳ್ಳಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಶರಣಪ್ಪಗೌಡ ಜಾಡಲದಿನ್ನಿ, ಸಿ.ವಿ. ನಾವದಗಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಮರಿಗೌಡ ಪಾಟೀಲ ನಿರೂಪಿಸಿದರು. ಘನಮಠದಯ್ಯ ಸಾಲಿಮಠ ಅಧ್ಯಕ್ಷತೆವಹಿಸಿದ್ದರು.
ಘನಮಠ ಅದ್ದೂರಿ ರಥೋತ್ಸವ
ಘನಮಠ ಶಿವಯೋಗಿಗಳ ಮಹಾ ರಥೋತ್ಸವ ಬುಧವಾರ ಸಂಜೆ ಅದ್ದೂರಿಯಾಗಿ ನಡೆಯಿತು. ಮಠದ ಪೀಠಾಧ್ಯಕ್ಷ ಗುರುಬಸವ ಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು ರಥಕ್ಕೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿದರು. ಬೆಳಿಗ್ಗೆ ಘನಮಠ ಶಿವಯೋಗಿಗಳ ಗದ್ದುಗೆಗೆ ಅಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಂಗಮ ವಟುಗಳಿಗೆ ಅಯ್ಯಾಚಾರ ಧೀಕ್ಷೆ ನಂತರ ರಥದ ಕಳಸಾರೋಹಣ ನಡೆಯಿತು. ವಚನ ಗ್ರಂಥ ಹಾಗೂ ಘನಮಠ ಶಿವಯೋಗಿಗಳ ಭಾವಚಿತ್ರದ ಪಲ್ಲಕ್ಕಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮಹಿಳೆಯರು ಕುಂಭ ಹಾಗೂ ಕಳಸದೊಂದಿಗೆ ಭಾಗವಹಿಸಿದ್ದರು. ವೀರಗಾಸೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು. ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಆನ್ವರಿ ಶಾಸಕ ಆರ್. ಬಸನಗೌಡ ತುರುವಿಹಾಳ ವಿಧಾನ ಪರಿಷತ್ತಿನ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪೂರ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಸೇರಿದಂತೆ ಅನೇಕ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.