ADVERTISEMENT

ವರ್ಷದ ಬಳಿಕ ಒಂದಾದ ತಂದೆ– ಮಗಳು

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 10:04 IST
Last Updated 29 ಫೆಬ್ರುವರಿ 2020, 10:04 IST

ರಾಯಚೂರು: ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಕಾಣೆಯಾಗಿದ್ದ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಾಲಕಿಯೊಬ್ಬಳು ಬರೊಬ್ಬರಿ ಒಂದು ವರ್ಷದ ಬಳಿಕ ಮರಳಿ ಪೋಷಕರಿಗೆ ಸೇರಿದ ಅಪರೂಪದ ಘಟನೆ ನಡೆದಿದೆ.

ಹೊಸಪೇಟೆಯ ರೈಲು ನಿಲ್ದಾಣದ ಬಳಿಯಲ್ಲಿ ವಾಸವಾಗಿರುವ ಮನೆಯ 12 ವರ್ಷ ಬಾಲಕಿ ರಾಣಿ (ಹೆಸರು ಬದಲಿಸಲಾಗಿದೆ) 2019ರ ಮಾರ್ಚ್ 16ರಂದು ದೇವಸ್ಥಾನಕ್ಕೆ ಹೋಗುವುದಾಗಿ ಮನೆಯಿಂದ ಹೊರಟು ರೈಲು ಹತ್ತಿದ್ದಳು. ಆನಂತರ ರಾಯಚೂರು ಗಡಿಭಾಗದ ಕೃಷ್ಣ ರೈಲ್ವೆ ನಿಲ್ದಾಣದಲ್ಲಿ ಇಳಿದು ಅಲ್ಲೇ ಓಡಾಡುತ್ತಿದ್ದಳು. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಬಾಲಕಿಯರನ್ನು ಮಕ್ಕಳ ಸಹಾಯವಾಣಿ ಮೂಲಕ ರಾಯಚೂರಿನ ಬಾಲಕಿಯರ ಬಾಲ ಮಂದಿರಕ್ಕೆ ದಾಖಲಿಸಲಾಗಿತ್ತು.

ಬಾಲಕಿಯ ಮಾಹಿತಿ ಮೇರೆಗೆ ಮಕ್ಕಳ ಸಹಾಯವಾಣಿ ಅಧ್ಯಕ್ಷರು ಹಾಗೂ ಸದಸ್ಯರು ಗುಂತಕಲ್‌ನಲ್ಲಿ ಪೊಷಕರ ಹುಡುಕಾಟ ನಡೆಸಿ ವಿಫಲರಾಗಿದ್ದರು. ಒಂದು ವರ್ಷದ ಬಳಿಕ ಬಾಲಕಿಯು ಹೊಸಪೇಟೆಯ ವಿಳಾಸ ನೀಡಿದ ಬಳಿಕ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಮುಖೇನ ಬಾಲಕಿ ವಿಳಾಸ ಪತ್ತೆ ಹಚ್ಚಿದ್ದಾರೆ.

ADVERTISEMENT

ಶುಕ್ರವಾರ ಬಾಲಕಿಯ ತಂದೆ ಹನುಮಂತ ಹಾಗೂ ಹೊಸಪೇಟೆಯ ಎಎಸ್‌ಐ ಜಯಲಕ್ಷ್ಮಿ ಅವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಗೆ ಬಂದು ಪುತ್ರಿಯನ್ನು ಕರೆದೊಯ್ದರು. ಅದೊಂದು ಬಾವುಕ ಕ್ಷಣವಾಗಿತ್ತು. ವರ್ಷದ ನಂತರ ಮಗಳನ್ನು ಪಡೆದ ಪಾಲಕರು ಖುಷಿಯಿಂದ ಕಣ್ಣೀರು ಹಾಕಿದರು.

ಜಿಲ್ಲಾ ಮಕ್ಕಳ ಘಟಕದ ರಕ್ಷಣಾಧಿಕಾರಿ ಗುರುಪ್ರಸಾದ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಮಂಗಳ ಹೆಗಡೆ, ಸಮಿತಿಯ ಸದಸ್ಯ ಪ್ರಭು ಪಾಟೀಲ್, ಸತೀಶ್ ಫನಾಂಡಿಸ್, ಶಾರದಾ ಪಾಟೀಲ್, ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ಸುಶೀಲಾ ಹ್ಯಾರೆಟ್, ಬಾಲ ಮಂದಿರದ ಆಪ್ತ ಸಂಯೋಜಕ ಮೀರಾ ಜೋಷಿ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸಾಂಸ್ಥಿಕ ಹನುಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.