ADVERTISEMENT

50 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ: ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸೌಲಭ್ಯ

₹990 ಕೋಟಿ ವೆಚ್ಚದ ಯೋಜನೆಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 6:22 IST
Last Updated 20 ಡಿಸೆಂಬರ್ 2025, 6:22 IST
ಕವಿತಾಳ ಸಮೀಪದ ಪಾಮನಕಲ್ಲೂರು ಮತ್ತಿತರ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕಾಲುವೆ ನಿರ್ಮಾಣದ ನೀಲ ನಕ್ಷೆ
ಕವಿತಾಳ ಸಮೀಪದ ಪಾಮನಕಲ್ಲೂರು ಮತ್ತಿತರ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕಾಲುವೆ ನಿರ್ಮಾಣದ ನೀಲ ನಕ್ಷೆ   

ಕವಿತಾಳ: ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಮತ್ತು ಸುತ್ತಲಿನ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಅಂದಾಜು ₹990 ಕೋಟಿ ವೆಚ್ಚದ ಯೋಜನೆಗೆ ಬೆಳಗಾವಿಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಸರ್ಕಾರದ ಈ ನಿರ್ಧಾರ ರೈತರು ಮತ್ತು ನೀರಾವರಿ ಹೋರಾಟಗಾರರಲ್ಲಿ ಆಶಾ ಭಾವನೆ ಚಿಗುರಿಸಿದೆ.

ಲಿಂಗಸುಗೂರು ತಾಲ್ಲೂಕಿನ ಕಾಳಾಪುರದಿಂದ ಪಾಮನಕಲ್ಲೂರುವರೆಗೆ ಮುಖ್ಯಕಾಲುವೆ ನಿರ್ಮಾಣವಾಗಲಿದೆ. ಪಾಮನಕಲ್ಲೂರು, ಅಮೀನಗಡ, ವಟಗಲ್‌, ಅಂಕುಶದೊಡ್ಡಿ, ಮಾರಲದಿನ್ನಿ, ಅಡವಿಭಾವಿ(ಮಸ್ಕಿ), ಮೆದಿಕನಾಳ, ತಲೆಖಾನ, ಗೂಂಡಾ, ಕಲ್ಮಂಗಿ, ಹಾಲಾಪುರ ಮತ್ತು ಗುಡುದೂರು ಸೇರಿದಂತೆ 12 ಗ್ರಾ.ಪಂ ವ್ಯಾಪ್ತಿಯ 58 ಹಳ್ಳಿಗಳು ಈ ಯೋಜನೆ ವ್ಯಾಪ್ತಿಗೆ ಬರುತ್ತವೆ. ಅಂದಾಜು 50 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತದೆ.

‘ಶಾಸಕರಾದ ನಂತರ ಆರ್‌.ಬಸನಗೌಡ ತುರ್ವಿಹಾಳ ಅವರು ಜಲಸಂಪನ್ಮೂಲ ಹಾಗೂ ಕೃಷ್ಣಭಾಗ್ಯ ಜಲನಿಗಮದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರುವ ಮೂಲಕ ಯೋಜನೆ ಜಾರಿಗೆ ಯತ್ನಿಸಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ’ ಎಂಬ ಮಾತುಗಳು ಕೇಳುತ್ತಿವೆ.

ADVERTISEMENT

‘ಟೆಂಡರ್‌ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಬೇಕು. ನೀರಾವರಿ ಸೌಲಭ್ಯದಿಂದ ಈ ಭಾಗದ ಜನರು ಗುಳೆ ಹೋಗವುದು ತಪ್ಪುತ್ತದೆ’ ಎಂದು ರೈತ ಹೋರಾಟಗಾರರು ತಿಮ್ಮನಗೌಡ ಚಿಲ್ಕರಾಗಿ, ಬಸವರಾಜಪ್ಪಗೌಡ ಹರ್ವಾಪುರ, ನಾಗರಡ್ಡೆಪ್ಪ ದೇವರಮನಿ ಮತ್ತು ಎನ್.ಶಿವನಗೌಡ ವಟಗಲ್‌ ಮತ್ತಿತರರು ತಿಳಿಸಿದರು.

‘ಸುರಂಗ ಕಾಲುವೆ ನಿರ್ಮಾಣಕ್ಕೆ ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಯೋಜನೆ ಜಾರಿ ಅಸಾಧ್ಯ ಎನ್ನಲಾಗಿತ್ತು. ನಂತರ ಪರ್ಯಾಯವಾಗಿ ಏತನೀರಾವರಿ ಯೋಜನೆ ಜಾರಿ ಬಗ್ಗೆ ಯೋಚಿಸಲಾಗಿತ್ತು. ಈಗಾಗಲೇ ನಾಲ್ಕು ಡಿಪಿಆರ್‌ ಮಾಡಲಾಗಿದೆ. ತಾಂತ್ರಿಕ ತಜ್ಞರ ಸಮಿತಿ ಯೋಜನೆ ಜಾರಿಗೆ ಒಪ್ಪುವುದು ಕಷ್ಟ’ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ತಿಳಿಸಿದರು.

ಕವಿತಾಳ ಸಮೀಪದ ಪಾಮನಕಲ್ಲೂರು ಮತ್ತಿತರ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕಾಲುವೆ ನಿರ್ಮಾಣದ ನೀಲ ನಕ್ಷೆ
ಕವಿತಾಳ ಸಮೀಪದ ಪಾಮನಕಲ್ಲೂರು ಮತ್ತಿತರ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕಾಲುವೆ ನಿರ್ಮಾಣದ ನೀಲ ನಕ್ಷೆ
ರೈತರಿಗೆ ನೀಡಿದ ಭರವಸೆಯಂತೆ ಮುಖ್ಯಮಂತ್ರಿ ಸಿದ್ರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಯೋಜನೆ ಜಾರಿಗೆ ಅನುಮೋದನೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಜೊತೆ ರೈತರ ಏಳಿಗೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ
ಆರ್.‌ ಬಸನಗೌಡ ತುರ್ವಿಹಾಳ ಮಸ್ಕಿ ಶಾಸಕ
ಬಜೆಟ್‌ನಲ್ಲಿ ಘೋಷಿಸಿದ ₹990 ಕೋಟಿ ಬಗ್ಗೆ ಮರು ಪ್ರಸ್ತಾಪಿಸಲಾಗಿದೆ. ತಾಂತ್ರಿಕ ಅನುಮೋದನೆ ಸಿಗಬೇಕಿದೆ ಯೋಜನೆ ಯಶಸ್ವಿಯಾಗಿ ಜಾರಿಯಾದರೆ ಒಳ್ಳೆಯದು
ಪ್ರತಾಪಗೌಡ ಪಾಟೀಲ್‌ ಮಾಜಿ ಶಾಸಕ ಮಸ್ಕಿ
ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಹಿರಿಯ ಅಧಿಕಾರಿಗಳಲ್ಲಿ ಚರ್ಚಿಸಿ ಕಾಮಗಾರಿ ಟೆಂಡರ್‌ ಕರೆಯುವ ಬಗ್ಗೆ ಶೀಘ್ರವೇ ನಿರ್ಧರಿಸಲಾಗುವುದು
ಹೆಸರು ಹೇಳಲು ಇಚ್ಛಿಸದ ಕೆಬಿಜೆಎನ್‌ಎಲ್‌ ಎಂಜಿನಿಯರ್‌

ಯೋಜನೆ ಭರವಸೆ ನೀಡಿದ್ದ ಶಾಸಕ ತುರ್ವಿಹಾಳ

ನಾರಾಯಣಪುರ ಬಲದಂಡೆ 5ಎ ನಾಲೆ ಯೋಜನೆ ಜಾರಿಗಾಗಿ ನಡೆದ ಹೋರಾಟ ಮಸ್ಕಿ ಕ್ಷೇತ್ರದ ರಾಜಕೀಯ ಚಿತ್ರಣವನ್ನು ಬದಲಿಸಿತು. 2018ರಲ್ಲಿ ಮಸ್ಕಿ ಕಾಂಗ್ರೆಸ್‌ ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಜೆಡಿಎಸ್‌ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಪತನದ ನಂತರ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದರೂ ಆಗ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರತಾಪಗೌಡ ಪಾಟೀಲ ಅವರು ಯೋಜನೆ ಜಾರಿ ಮಾಡುವುದು ತಾಂತ್ರಿಕವಾಗಿ ಅಸಾಧ್ಯ ಎಂದು ಹೇಳಿ ರೈತರು ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿ ಸೋಲನುಭವಿಸಿದರು. ಬಿಜೆಪಿ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್‌.ಬಸನಗೌಡ ತುರ್ವಿಹಾಳ ಅವರು 5ಎ ನಾಲೆ ನಿರ್ಮಿಸುವ ಭರವಸೆಯೊಂದಿಗೆ ಪ್ರಚಾರ ಕೈಗೊಂಡಿದ್ದರು. ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ್ದ ಸಿದ್ರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಅವರು ಆರ್.‌ ಬಸನಗೌಡ ಅವರನ್ನು ಗೆಲ್ಲಿಸಿದರೆ ಯೋಜನೆ ಜಾರಿ ಭರವಸೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.