ADVERTISEMENT

ಲಿಂಗಸುಗೂರು: ಕೃಷಿಕರ ಜಾತ್ರೆ, ಗುರುಗುಂಟಾ ಅಮರೇಶ್ವರ ರಥೋತ್ಸವ

ಇಂದಿನಿಂದ 15 ದಿನಗಳ ಸಂಭ್ರಮ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 18 ಮಾರ್ಚ್ 2022, 19:30 IST
Last Updated 18 ಮಾರ್ಚ್ 2022, 19:30 IST
ಲಿಂಗಸುಗೂರು ತಾಲ್ಲೂಕು ಗುರುಗುಂಟಾ ಅಮರೇಶ್ವರ ದೇವಸ್ಥಾನ
ಲಿಂಗಸುಗೂರು ತಾಲ್ಲೂಕು ಗುರುಗುಂಟಾ ಅಮರೇಶ್ವರ ದೇವಸ್ಥಾನ   

ಲಿಂಗಸುಗೂರು: ತಾಲ್ಲೂಕಿನ ಗುರುಗುಂಟಾ ಅಮರೇಶ್ವರ ದೇವರ ಜಾತ್ರಾಮಹೋತ್ಸವ ನಿಮಿತ್ತ ಶುಕ್ರವಾರ ಸಂಜೆ 6.30ಕ್ಕೆ ರಥೋತ್ಸವ ಜರುಗಲಿದೆ.

ಸಾಂಪ್ರದಾಯಿಕವಾಗಿ ಹೋಳಿ ಹುಣ್ಣಿಮೆ ದಿನದ ರಥೋತ್ಸವಕ್ಕೆ ಒಂದು ವಾರ ಮುಂಚೆಯೇ ಹೊನ್ನಳ್ಳಿ, ಯರಡೋಣ, ದೇವರಭೂಪುರ, ಗುಂತಗೋಳ, ಗುರುಗುಂಟಾಗಳಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯುತ್ತವೆ.

ಹೋಳಿ ಹುಣ್ಣಿಮೆ ದಿನ ದೇವಸ್ಥಾನಕ್ಕೆ ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು ಮತ್ತು ರಥ ಕಳಸದ ಪ್ರವೇಶ ಆಗುತ್ತಿದ್ದಂತೆ ರಥೋತ್ಸವದ ಪೂಜಾ ಕೈಂಕರ್ಯಗಳಿಗೆ ವಿದ್ಯುಕ್ತ ಚಾಲನೆ ದೊರಕುತ್ತದೆ.

ADVERTISEMENT

ಹದಿನೈದು ದಿನಗಳ ಕಾಲ ನಡೆಯುವ ಜಾತ್ರೆಗೆ ಬಂದು ಹೋಗುವ ಭಕ್ತರಿಗಾಗಿ ಹೆಚ್ಚುವರಿ ತಾತ್ಕಾಲಿಕ ಶೌಚಾಲಯ, ಕುಡಿವ ನೀರಿನ ವ್ಯವಸ್ಥೆ, ವಿದ್ಯುತ್‍ ದೀಪಗಳ ಅಲಂಕಾರ, ಕಳ್ಳತನ, ಸಮಾಜ ವಿರೋಧಿ ಕೃತ್ಯಗಳ ಮೇಲೆ ನಿಗಾ ವಹಿಸಲು ಪ್ರತ್ಯೇಕ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ, ಪೊಲೀಸ್‍ ಬಂದೋ ಬಸ್ತ್‌ ಜೊತೆಗೆ ಹೆಚ್ಚುವರಿಯಾಗಿ 160 ಗೃಹ ರಕ್ಷಕ ದಳ ಸಿಬ್ಬಂದಿ ನಿಯೋಜನೆ, ಹಟ್ಟಿ ಚಿನ್ನದ ಗಣಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಹೋಳಿ ಹುಣ್ಣಿಮೆ ದಿನವಾದ ಶುಕ್ರವಾರ ಮಾರ್ಚ್‌ 18ರಂದು ಸಂಜೆ 6ಗಂಟೆಗೆ ಚುನಾಯಿತ ಪ್ರತಿನಿಧಿಗಳು, ಗುರುಗುಂಟಾ, ಗುಂತಗೋಳ ಸಂಸ್ಥಾನಿ ಕರಿಂದ ಪೂಜಾ ವಿಧಿ ವಿಧಾನ ಗಳು ಪೂರೈಸುತ್ತಿದ್ದಂತೆ ರಥೋತ್ಸವ ಜರಗುತ್ತದೆ.

’ಜಾನುವಾರು ಬಜಾರ, ಕೃಷಿ ಪರಿಕರ, ಬಟ್ಟೆ, ಕಿರಾಣಿ, ಬಾಂಡೆ, ಅಡುಗೆ ಸಾಮಗ್ರಿ ಸೇರಿದಂತೆ ವೈವಿಧ್ಯಮಯ ಅಂಗಡಿ ಮುಂಗಟ್ಟುಗಳ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ತಹಶೀಲ್ದಾರ್ ಬಲರಾಮ್‍ ಕಟ್ಟಿಮನಿ ವಿವರಿಸುತ್ತಾರೆ.

‘ಜಾತ್ರೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಪೊಲೀಸ್‍ ಬಂದೋ ಬಸ್ತ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಾತ್ರೆಗೆ ಬರುವ ಭಕ್ತರು ಬೆಲೆ ಬಾಳುವ ಬಂಗಾರದ ಒಡವೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಮಾಜ ವಿರೋಧಿ ಅಥವಾ ಜೂಜಾಟದಂತ ಕೃತ್ಯಗಳ ಮಾಹಿತಿ ನೀಡಬೇಕು. ಪೊಲೀಸ್‍ ಇನ್‍ಸ್ಪೆಕ್ಟರ್‌ ಮಹಾಂತೇಶ ಸಜ್ಜನ, ಪಿಎಸ್‍ಐ ಪ್ರಕಾಶರೆಡ್ಡಿ ಡಂಬಳ ನೇತೃತ್ವದಲ್ಲಿ ಸಿದ್ಧತೆ ಮಾಡಿ ಕೊಂಡಿದ್ದೇವೆ’ ಎಂದು ಡಿವೈಎಸ್ಪಿ ಎಸ್‍.ಎಸ್‍ ಹುಲ್ಲೂರು ಮಾಹಿತಿ ನೀಡಿದ್ದಾರೆ.

*

ಕೃಷಿಕರ ಜಾತ್ರೆ ಆಗಿದ್ದರಿಂದ ಜಾನುವಾರುಗಳ ಜಾತ್ರೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮನೋರಂಜನೆ, ಕೃಷಿ ಪರಿಕರ, ಅಗತ್ಯ ವಸ್ತುಗಳ ಮಾರಾಟಕ್ಕೆ ದೇವಸ್ಥಾನ ಸಮಿತಿ ಅಚ್ಚುಕಟ್ಟಾದ ಸಿದ್ಧತೆ ಮಾಡಿಕೊಂಡಿದೆ.
-ಬಲರಾಮ್‍ ಕಟ್ಟಿಮನಿ, ತಹಶೀಲ್ದಾರ್, ಲಿಂಗಸುಗೂರು

**

ಎರಡು ವರ್ಷಗಳಿಂದ ಕೋವಿಡ್‍ ಅಟ್ಟಹಾಸದಿಂದ ಗುರುಗುಂಟಾ ಅಮರೇಶ್ವರ ಜಾತ್ರಾ ಮಹೋತ್ಸವ ರದ್ದುಗೊಂಡಿತ್ತು. ಈ ವರ್ಷ ಜಾತ್ರೆ ನಡೆಯುತ್ತಿರುವುದು ಅಮರೇಶ್ವರ ಭಕ್ತರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ.
-ರಾಜಾ ಸೋಮನಾಥ ನಾಯಕ ಸಂಸ್ಥಾನಿಕರು, ಗುರುಗುಂಟಾ ಸಂಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.