ADVERTISEMENT

ಕುರುಬರನ್ನು ಬೆಳೆಸದ ಸಿದ್ದರಾಮಯ್ಯ: ಎಚ್.ವಿಶ್ವನಾಥ ಟೀಕೆ

ಹಾಲುಮತ ಸಂಸ್ಕೃತಿ ವೈಭವ–2021 ಸಮಾರೋಪ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 14:15 IST
Last Updated 14 ಜನವರಿ 2021, 14:15 IST
ಜಾಲಹಳ್ಳಿ ಸಮೀಪದ ತಿಂಥಣಿ ಬ್ರಿಡ್ಜ್‌ ಗುಡ್ಡದಲ್ಲಿರುವ ಕಲಬುರ್ಗಿ ವಿಭಾಗದ ಕನಕಗುರು ಪೀಠದಲ್ಲಿ ನಡೆದ ಹಾಲುಮತ ಸಂಸ್ಕೃತಿ ವೈಭವದ ಕೊನೆಯ ದಿನ ಗುರುವಾರ ನಡೆದ ಸಮಾರಂಭದಲ್ಲಿ ವಿವಿಧೆಡೆಯಿಂದ ಜನರು ಭಾಗವಹಿಸಿದ್ದರು
ಜಾಲಹಳ್ಳಿ ಸಮೀಪದ ತಿಂಥಣಿ ಬ್ರಿಡ್ಜ್‌ ಗುಡ್ಡದಲ್ಲಿರುವ ಕಲಬುರ್ಗಿ ವಿಭಾಗದ ಕನಕಗುರು ಪೀಠದಲ್ಲಿ ನಡೆದ ಹಾಲುಮತ ಸಂಸ್ಕೃತಿ ವೈಭವದ ಕೊನೆಯ ದಿನ ಗುರುವಾರ ನಡೆದ ಸಮಾರಂಭದಲ್ಲಿ ವಿವಿಧೆಡೆಯಿಂದ ಜನರು ಭಾಗವಹಿಸಿದ್ದರು   

ಜಾಲಹಳ್ಳಿ: ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಕುರುಬ ಸಮುದಾಯದ ಎರಡನೇ ಹಂತದ ನಾಯಕರನ್ನು ಬೆಳೆಸಲೇ ಇಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ ವಾಗ್ದಾಳಿ ನಡೆಸಿದರು.

ಇಲ್ಲಿನ ತಿಂಥಣಿ ಬ್ರಿಡ್ಜ್‌ ಗುಡ್ಡದಲ್ಲಿರುವ ಕಲಬುರ್ಗಿ ವಿಭಾಗದ ಕನಕಗುರು ಪೀಠದಲ್ಲಿ ನಡೆದ ಹಾಲುಮತ ಸಂಸ್ಕೃತಿ ವೈಭವದ ಕೊನೆಯ ದಿನ ಗುರುವಾರ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಈಗ ಎಸ್‌ಟಿ ಹೋರಾಟದ ಬಗ್ಗೆ ಹಾಗೂ ಬಿಜೆಪಿ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಅಧಿಕಾರದಲ್ಲಿದ್ದ ಐದು ವರ್ಷ ಸಿದ್ದರಾಮಯ್ಯ ಏನು ಮಾಡಿದ್ದಾರೆ. ಅಧಿಕಾರ ಅವಧಿಯಲ್ಲಿ ಎಸ್‌ಟಿ ಮೀಸಲಾತಿಗೆ ಶಿಫಾರಸು ಮಾಡದೇ ಏಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದರು. ತಮ್ಮ ಅಧಿಕಾರ ಅವಧಿಯಲ್ಲಿ ಒಬ್ಬ ಕುರುಬ ನಾಯಕರನ್ನು ಬೆಳೆಸಲಿಲ್ಲ. ಕೊನೆ ಗಳಿಗೆಯಲ್ಲಿ ಎಚ್‌.ಎಂ. ರೇವಣ್ಣ ಮತ್ತು ಎಚ್‌.ವೈ. ಮೇಟಿ ಅವರಿಗೆ ಅಧಿಕಾರ ಕೊಟ್ಟು ಕಿತ್ತು ಕೊಂಡರು. ಈಗ ಕುರುಬ ಸಮುದಾಯದ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ’ ಎಂದರು.

ADVERTISEMENT

‘ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದಲ್ಲಿ ನಾಲ್ವರು ಕುರುಬ ಸಮುದಾಯದ ಸಚಿವರು ಇದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ಎಷ್ಟು ಕುರುಬರಿಗೆ ಸಚಿವ ಸ್ಥಾನ ನೀಡಿದ್ದರು ಎಂದು ನೋಡಬೇಕು. ಕೇವಲ ಭಾಷಣ ಮಾಡಿ ಕಾಲ ಕಳೆಯುತ್ತಿದ್ದಾರೆ. ಕುರುಬರಿಗೆ ಎಸ್‌ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಹೋರಾಟ ನಡೆಯುತ್ತಿದೆ. ಅದನ್ನು ಬೆಂಬಲಿಸುವ ಬದಲು ಯಾಕೆ ಟೀಕೆ ಮಾಡುತ್ತಿದ್ದಾರೆ. ಜನವರಿ 15ರಂದು ಕಾಗಿನೆಲೆಯಲ್ಲಿ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ನಡೆಯಲಿದೆ. ಸಮುದಾಯದ ಬಗ್ಗೆ ಗೌರವವಿದ್ದರೆ ಸಿದ್ದರಾಮಯ್ಯ ಅವರು ಹೋರಾಟದಲ್ಲಿ ಭಾಗವಹಿಸಬೇಕು’ ಎಂದು ಖರವಾಗಿ ಹೇಳಿದರು.

ತಿಂಥಣಿ ಕನಕ ಗುರು ಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕೆ.ಆರ್‌ ನಗರದ ಕನಕಗುರುಪೀಠದ ಶಿವಾನಂದಪುರಿ ಸ್ವಾಮೀಜಿ, ಬಂದಿನಾಳ ಮಠದ ಶಿವಸಿದ್ದೇಶ್ವರ ಸ್ವಾಮೀಜಿ, ಬೀರಲಿಂಗ ದೇವರು ಸ್ವಾಮೀಜಿ ಇದ್ದರು.

ವಿಶ್ರಾಂತ ಉಪಕುಲಪತಿ ಡಾ. ಲಕ್ಕಪ್ಪಗೌಡರ ಅವರಿಗೆ ಕನಕರತ್ನ ಪ್ರಶಸ್ತಿ ಹಾಗೂ ಮಲಪನ ಗುಡಿಯ ಸುಭದ್ರಮ್ಮ ಕಾರಮಿಂಚಪ್ಪ ಅವರಿಗೆ ಸಿದ್ಧಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಮಾನಪ್ಪ ವಜ್ಜಲ್, ಐಎಎಸ್‌ ಪ್ರೋಪೇಷನರಿ ಅಧಿಕಾರಿ ಡಾ.ಆಕಾಸ್‌ ಕಲಬುರ್ಗಿ, ಬೀದರ್‌ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ, ಚಂದ್ರಕಾಂತ ಬಿಜ್ಜರಗಿ, ಮುಖಂಡರಾದ ಸಿದ್ದು ಬಂಡಿ, ವಕೀಲ ಬಿ.ಎಂ.ಮೇಟಿ, ಅಮೃತ್‌ರಾವ್‌ ಚಿಮ್ಕೋಡೆ, ರಾಜು, ಶರಣಪ್ಪ ಸಾಂದಪುರ, ಭೀರಪ್ಪ, ಪಂಡಿತ್ ರಾವ್, ಮಂಜುನಾಥ್, ಚಂದ್ರಕಾಂತ್, ನಾರಾಯಣಪ್ಪ, ಶರಣಯ್ಯ ಒಡಯರ್‌ ಮತ್ತಿತರರು ಇದ್ದರು. ಶಿಕ್ಷಕ ಮಹಾತೇಶ, ಬಸವರಾಜ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.