ADVERTISEMENT

ತಾ.ಪಂ, ಜಿ.ಪಂ ಚುನಾವಣೆಗೆ ಸಿದ್ಧರಾಗಿ: ಶಾಸಕ ಹಂಪನಗೌಡ ಬಾದರ್ಲಿ

ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 7:15 IST
Last Updated 28 ಡಿಸೆಂಬರ್ 2025, 7:15 IST
ಸಿಂಧನೂರಿನ ಕೋಟೆ ಈರಣ್ಣ ದೇವಸ್ಥಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು
ಸಿಂಧನೂರಿನ ಕೋಟೆ ಈರಣ್ಣ ದೇವಸ್ಥಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು   

ಸಿಂಧನೂರು: ಸರ್ಕಾರ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ತೀರ್ಮಾನಿಸಿದ್ದು, ಕಾರ್ಯಕರ್ತರು ಈಗಿನಿಂದಲೇ ಚುನಾವಣೆಗೆ ಸಿದ್ಧರಾಗಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಕರೆ ನೀಡಿದರು.

ನಗರದ ಕೋಟೆ ಈರಣ್ಣ ದೇವಸ್ಥಾನದಲ್ಲಿ ಶನಿವಾರ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳ ಅವಧಿಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು, ಜನರನ್ನು ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ. ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ, ಸ್ಥಳೀಯ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು’ ಎಂದು ಅವರು ಮನವಿ ಮಾಡಿದರು.

ADVERTISEMENT

‘ಐದು ಬಾರಿ ಕ್ಷೇತ್ರದ ಜನತೆ ತಮಗೆ ಆಶೀರ್ವಾದ ಮಾಡಿದ್ದು, ಎಲ್ಲರ ಪ್ರೀತಿ, ವಿಶ್ವಾಸದಿಂದ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ. ತಾಲ್ಲೂಕನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಲು ಹಾಗೂ ಕೆಳಭಾಗದ ರೈತರಿಗೂ ನೀರು ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆದರೆ ವಿರೋಧ ಪಕ್ಷದವರು ಜಲಾಶಯದಲ್ಲಿ ನೀರು ಇರದಿದ್ದರೂ, ನೀರಿಗಾಗಿ ಹೋರಾಟ ಮಾಡಿ ರೈತರನ್ನು ಗೊಂದಲಕ್ಕೆ ಸಿಲುಕಿಸಲು ಪ್ರಯತ್ನಿಸಿದ್ದು ಸರಿ ಅಲ್ಲ. ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು’ ಎಂದರು.

ಈ ವೇಳೆ ಕಾಂಗ್ರೆಸ್ ಮುಖಂಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಲಿಂಗಪ್ಪ, ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್, ಎಂ.ಕಾಳಿಂಗಪ್ಪ ವಕೀಲ, ಆರ್.ತಿಮ್ಮಯ್ಯ ನಾಯಕ, ಶ್ರೇಣಿಕರಾಜ ಶೇಠ್, ಸಿದ್ದರಾಮಪ್ಪ ಮಾಡಸಿರವಾರ, ಅಶೋಕ ಭೂಪಾಲ ಧಡೇಸುಗೂರು, ಲಿಂಗರಾಜ ಪಾಟೀಲ ಹಂಚಿನಾಳಕ್ಯಾಂಪ್, ಬಸವರಾಜ ಹಿರೇಗೌಡರ್, ರಾಜುಗೌಡ ಬಾದರ್ಲಿ, ಎನ್.ಅಮರೇಶ, ವೈ.ನರೇಂದ್ರನಾಥ, ಅಶೋಕ ಉಮಲೂಟಿ, ಹಂಪಯ್ಯಸ್ವಾಮಿ ರ‍್ಯಾವಿಹಾಳ, ತಿಮ್ಮಣ್ಣ ಸಾಹುಕಾರ, ಹಾರೂನ್‌ಪಾಷಾ ಜಾಗೀರದಾರ, ಮಾಬುಸಾಬ್ ಮುಳ್ಳೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.