ADVERTISEMENT

ಹಟ್ಟಿ ಚಿನ್ನದ ‌ಗಣಿ | ಬಸ್‌ ಕೊರತೆ: ಬಾಗಿಲಲ್ಲಿ ನಿಂತು ಪಯಣ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2025, 11:31 IST
Last Updated 9 ಫೆಬ್ರುವರಿ 2025, 11:31 IST
ಹಟ್ಟಿ ಪಟ್ಟಣದಿಂದ ಲಿಂಗಸುಗೂರು ಪಟ್ಟಣಕ್ಕೆ ತೆರಳುವ ಬಸ್‌ನ ಬಾಗಿಲಲ್ಲಿ‌ ನಿಂತುಕೊಂಡು ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು
ಹಟ್ಟಿ ಪಟ್ಟಣದಿಂದ ಲಿಂಗಸುಗೂರು ಪಟ್ಟಣಕ್ಕೆ ತೆರಳುವ ಬಸ್‌ನ ಬಾಗಿಲಲ್ಲಿ‌ ನಿಂತುಕೊಂಡು ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು   

ಹಟ್ಟಿ ಚಿನ್ನದ ‌ಗಣಿ: ಬಸ್ ಕೊರತೆಯ ಕಾರಣಕ್ಕೆ ಇರುವ ಬಸ್‌ಗಳಲ್ಲಿಯೂ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ಶಾಲಾ–ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬಾಗಿಲಲ್ಲಿ ನಿಂತು ಸಂಚರಿಸಬೇಕಾದ ಸ್ಥಿತಿ ಇದೆ.

ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸಿಕೊಂಡಿದ್ದಾರೆ. ಬೆಳಿಗ್ಗೆ 7ರಿಂದ 9 ರವರೆಗೂ ಹಟ್ಟಿ ಪಟ್ಟಣದಿಂದ ಲಿಂಗಸುಗೂರಿಗೆ ಶಾಲಾ ಕಾಲೇಜುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬರುತ್ತಾರೆ.

ಬಸ್‌ಗಳಲ್ಲಿ ಕಿಕ್ಕಿರಿದು ಪ್ರಯಾಣಿಕರನ್ನು ತುಂಬಿಸಿಕೊಳ್ಳುವುದರಿಂದ ಸಕಾಲದಲ್ಲಿ ಶಾಲಾ–ಕಾಲೇಜಿಗೆ ಹೋಗಬೇಕು ಎಂದು ಬಸ್ ಬಾಗಿಲಲ್ಲಿಯೇ ನಿಂತುಕೊಂಡು ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ಬೆಳಿಗ್ಗೆ ಮತ್ತು ಸಂಜೆ ವೇಳೆ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು. ಕೆಲ ಬಸ್‌ಗಳಿಗೆ ಪಾಸ್ ಪರಿಗಣಿಸುವಂತೆ ಅಧಿಕಾರಿಗಳು ಆದೇಶ ಹೊರಡಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ADVERTISEMENT

ಹಟ್ಟಿ ಪಟ್ಟಣಕ್ಕೆ‌ ಬೆಳಿಗ್ಗೆ ಹಾಗೂ ಸಂಜೆ ಹೆಚ್ಚಿನ‌ ಬಸ್ ವ್ಯವಸ್ಥೆ ಕಲ್ಪಿಸಿದರೆ ವಿದ್ಯಾರ್ಥಿಗಳು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಬಾಗಿಲಲ್ಲಿ ನಿಂತು ಪ್ರಯಾಣಿಸುವಾಗ ಅನಾಹುತ ನಡೆದರೆ ಯಾರು ಹೊಣೆ? ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು‌ ಆಗ್ರಹಿಸಿದ್ದಾರೆ.

ಹೋರಾಟ ಮಾಡಿದರೂ ಸ್ಪಂದಿಸದ ಬಸ್‌ ಘಟಕ ವ್ಯವಸ್ಥಾಪಕ: ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಮಾಡಿ‌ ಎಂದು ಹಲವು ಸಲ ಹೋರಾಟ‌ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಗುಜರಿಗೆ ಹಾಕಬೇಕಾದ ಬಸ್‌ಗಳನ್ನು ಓಡಿಸುತ್ತಾರೆ. ರಸ್ತೆ ಮಧ್ಯ ಕೆಟ್ಟು ನಿಲ್ಲುತ್ತಿವೆ ಎಂದು ಹೋರಾಟಗಾರ ಸುರೇಶ ಗುರಿಕಾರ‌ ಹೇಳಿದರು.

ಸಮಸ್ಯೆ ಬಗೆಹರಿಸದ ಬಸ್‌ ಘಟಕ ವ್ಯವಸ್ಥಾಪಕರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಮೇಲಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಕೆಕೆಆರ್‌ಟಿಸಿ ವಿರುದ್ಧ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆದು ಹೋರಾಟ ನಡೆಸಬೇಕಾಗುತ್ತದೆ ಎಂದು ಹಿಂದೂ ದಲಿತ ಹೋರಾಟ ಸಮಿತಿಯ ಅಧ್ಯಕ್ಷ ವಿನೋದ ಕುಮಾರ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.