ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣದ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಚುನಾವಣೆ ಪ್ರಚಾರ ಜೋರಾಗಿದ್ದು ಕಾರ್ಮಿಕರು ಯಾರ ಕೈ ಹಿಡಿಯಲಿದ್ದಾರೆ ಎನ್ನುವುದು ಕುತೂಹಲ ಮನೆಮಾಡಿದೆ.
ತಕ್ಕಡಿ ಚಿಹ್ನೆಯ ಎಐಟಿಯುಸಿ, ಸಿಐಟಿಯು ಚಿಹ್ನೆಯ ಬಂಡಿಗಾಲಿ, ಆಕಳು ಪಕ್ಷದ ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಇದೆ. ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದಲ್ಲಿರುವ 25 ಪದಾಧಿಕಾರಿಗಳ ಸ್ಥಾನಗಳಿಗೆ ಒಟ್ಟು 120 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 3,385 ಕಾರ್ಮಿಕರ ಮತಗಳು ಇವೆ.
ಜೂ.21ರಂದು ಮತದಾನ ನಡೆಯಲಿದ್ದು 22ರಂದು ಫಲಿತಾಂಶ ಪ್ರಕಟವಾಗಲಿದೆ. ಅಧ್ಯಕ್ಷ ಸ್ಥಾನಕ್ಕೆ, ಎಐಟಿಯುಸಿ ಸಂಘದ ಚಂದ್ರಶೇಖರ, ಸಿಐಟಿಯು ಕೆ.ಮಹಾಂತೇಶ, ಟಿಯುಸಿಐ ಸಂಘದ ಮಾನಸಯ್ಯ, ಆಕಳು ಪಕ್ಷದ ರಾಘವೇಂದ್ರ ಕುಷ್ಟಗಿ ಸ್ಪರ್ಧಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಐಟಿಯುಸಿ ಸಂಘದ ವಿಜಯಭಾಸ್ಕರ್, ಸಿಐಟಿಯು ಬಂಡಿಗಾಲಿಯ ಎಸ್.ಎಂ.ಶಪೀ, ಆಕಳು ಪಕ್ಷದ ವಾಲೇಬಾಬು, ಟಿಯುಸಿಐ ಸಂಘದ ಅಮೀರ್ ಅಲೀ ಕಣದಲ್ಲಿ ಇದ್ದಾರೆ.
ನಾಲ್ಕು ಸಂಘಟನೆಯ ಕಾರ್ಮಿಕ ಮುಖಂಡರು ಮೆಡಿಕಲ್ ಅನ್‌ಫಿಟ್ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ತಕ್ಕಡಿ, ಬಂಡಿಗಾಲಿ, ಆಕಳು ಪಕ್ಷಗಳ ಪೈಪೋಟಿ ಇದ್ದು ಕಾರ್ಮಿಕ ಒಲವು ಯಾರ ಕಡೆ ಇದೆ ಎನ್ನುವುದು ಭಾನುವಾರ ತಿಳಿಯಲಿದೆ.
ಹರಿದಾಡಿದ ಆಡಿಯೊ: ಗಣಿ ಕಂಪನಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಕೆಲ ಮುಖಂಡರಿಗೆ ಮುಜುಗರಕ್ಕೆ ಕಾರಣವಾಗಿದೆ.
ಬಹಿರಂಗ ಸಭೆಯಲ್ಲಿ ಆರೋಪ ಪ್ರತ್ಯಾರೋಪ ಮಾಡಿದ ಕಾರ್ಮಿಕ ಮುಖಂಡರು ತಮ್ಮ ಗುಟ್ಟನ್ನು ತಾವೇ ಬಯಲು ಮಾಡಿದ್ದಾರೆ ಎಂದು ಕಾರ್ಮಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಎಐಟಿಯುಸಿನಲ್ಲಿ ಉಸಿರುಗಟ್ಟುವ ವಾತಾವರಣ ಇದೆ. ಸಿಯುಟಿಯನ ಬಂಡಿಗಾಲಿಯ ಮೇಲೆ ಕಾರ್ಮಿಕರು ಒಲವು ತೋರುತ್ತಿದ್ದಾರೆ. ಈ ಭಾರಿ ಸಿಐಟಿಯು ಅಧಿಕಾರಕ್ಕೆ ಬರಲಿದೆ.– ಎಸ್.ಎಫ್.ಶಪೀ, ಸಿಐಟಿಯು ಅಭ್ಯರ್ಥಿ
ಐತಿಹಾಸಿಕ ವೇತನ ಒಪ್ಪಂದವನ್ನು ಎಐಟಿಯುಸಿ ಸಂಘಟನೆ ಮಾಡಿದೆ. ತಕ್ಕಡಿ ಪಾರ್ಟಿ ಅಧಿಕಾರಕ್ಕೆ ಬಂದ ಕೂಡಲೇ ಕಾರ್ಮಿಕರ ಸಮಸ್ಯೆ ಬಗೆಹರಿಯಲಿವೆ.– ವಿಜಯಬಾಸ್ಕರ್, ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಎಐಟಿಯುಸಿ ಸಿಯುಟಿಐ ಒಂದೇ ನಾಣ್ಯದ ಎರಡು ಮುಖಗಳು. ಕಾರ್ಮಿಕರು ಇವರ ನಡೆಗೆ ಬೇಸತ್ತು ಹೋಗಿದ್ದಾರೆ. ಎರಡು ಸಂಘಟನೆಗಳು ಸೋಲುವುದು ಖಚಿತ. ಟಿಯುಸಿಐ ಸೈಕಲ್ ಪಾರ್ಟಿ ಜಯಗಳಿಸಲಿದೆ.– ಅಮೀರ್ ಅಲೀ, ಟಿಯುಸಿಐ ಸಂಘದ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.