
ಹಟ್ಟಿ ಚಿನ್ನದ ಗಣಿ: ಬುಧವಾರ ರಾತ್ರಿ ಸುರಿದ ಮಳೆಗೆ ಗೌಡೂರು, ಹೊಸಗುಡ್ಡ ಗ್ರಾಮದ ಹಳ್ಳಗಳು ತುಂಬಿ ಹರಿದಿದ್ದು, ಮೂರು ಮನೆಗಳು ಕುಸಿದಿವೆ.
ಗೌಡೂರು ಗ್ರಾಮದ ಚನ್ನಪ್ಪ ಬೈನಾರ್, ಅಮರೇಶ ಗ್ಯಾರೇಜ್, ಅಮರೇಶ ಮಾನ್ವಿ ಅವರ ಮನೆಯೊಳಗೆ ಮಳೆ ನೀರು ನುಗ್ಗಿ ಮನೆಯಲ್ಲಿ ಸಂಗ್ರಹಿಸಿ ಇಟ್ಟ ದವಸ–ಧಾನ್ಯಗಳು ನನೆದು ಹಾಳಾಗಿವೆ.
‘ಸಮಸ್ಯೆ ಬಗ್ಗೆ ಕಂದಾಯ ಅಧಿಕಾರಿಗಳ ಗಮನಕ್ಕೆ ತಂದರೆ ನಾಳೆ ಬರುತ್ತವೆ ಎಂದು ಉಡಾಫೆ ಉತ್ತರ ನೀಡುತ್ತಾರೆ. ನಮ್ಮ ಗೋಳು ಕೇಳುವವರೆ ಇಲ್ಲದಂತಾಗಿದೆ’ ಎಂದು ಹೊಸಗುಡ್ಡ ಗ್ರಾಮದ ನಿವಾಸಿಗಳಾದ ಬಸಮ್ಮ, ಹನುಮಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಹೊಸಗುಡ್ಡ ಹಳ್ಳ ಮತ್ತು ಬಂಡೆಭಾವಿ ಗ್ರಾಮದ ಹತ್ತಿರ ಇರುವ ಜಟ್ಟಿರ ಹಳ್ಳ ತುಂಬಿ ಹರಿದ ಪರಿಣಾಮ ರಸ್ತೆ ಸಂಪರ್ಕ ಕಡಿತವಾಗಿ ಜನರು ಪರದಾಡಿದರು. ಜನರು ಗೌಡೂರು ಗ್ರಾಮದ ಮೂಲಕ ತೆರಳಿದರು.
ಬಂಡೆಭಾವಿ ಗ್ರಾಮದ ಹತ್ತಿರ ಇರುವ ಜಟ್ಟೆರ ಹಳ್ಳ ತುಂಬಿ ಹರಿಯುವಾಗ ಶಿಕ್ಷಕ ಆದಪ್ಪ, ರಮೇಶ ಹಳ್ಳದಾಟಿ ಸರ್ಕಾರಿ ಶಾಲೆಗೆ ಪಾಠ ಮಾಡಲು ತೆರಳಿದರು.
ಬೆಳೆ ಹಾನಿ: ಸತತವಾಗಿ ಸುರಿಯುತ್ತಿರುವ ಮಳೆ ಆರ್ಭಟಕ್ಕೆ ರೈತರು ಬೆಳೆದ ಸಜ್ಜೆ, ತೊಗರಿ, ಹತ್ತಿ, ಎಳ್ಳು, ಸೂರ್ಯಕಾಂತಿ ಬೆಳೆಗಳು ಕೊಳೆತು ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ರೈತರ ನೆರವಿಗೆ ಧಾವಿಸಿ ಬೆಳೆ ಪರಿಹಾರ ಒದಗಿಸಬೇಕು ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.