
ರಾಯಚೂರು: ‘ಪುರಾತತ್ವ ಇಲಾಖೆಯ ಜಾಗ ಅತಿಕ್ರಮಣ ಮಾಡಿದರೆ 2024ರ ಆಗಸ್ಟ್ 12ರ ತಿದ್ದುಪಡಿ ಕಾಯ್ದೆ ಅನ್ವಯ ಇನ್ನು ₹ 1 ಲಕ್ಷ ದಂಡ ವಿಧಿಸಲಾಗುವುದು. ಅತಿಕ್ರಮಣಕಾರರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಜ್ಯ ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜು.ಎ ಎಚ್ಚರಿಕೆ ನೀಡಿದರು.
‘ನಗರದ ಕೋಟೆ ಪ್ರದೇಶದಲ್ಲಿ ವ್ಯಾಪಕವಾಗಿ ಅತಿಕ್ರಮಣವಾಗಿರುವುದು ಕಂಡು ಬಂದಿದೆ. ಕೆಲವರಿಗೆ ಈಗಾಗಲೇ ನೋಟಿಸ್ ಕೊಡಲಾಗಿದೆ. ಜೆಸ್ಕಾಂ ಕಚೇರಿಯ ಪಕ್ಕದಿಂದ ಕೋಟೆಗೆ ತೆರಳುವ ಜಾಗವೂ ಅತಿಕ್ರಮಣವಾಗಿದೆ. ಅದನ್ನು ಮಹಾನಗರ ಪಾಲಿಕೆ ಸಹಕಾರದೊಂದಿಗೆ ತೆರವುಗೊಳಿಸಲಾಗುವುದು’ ಎಂದು ನಗರದಲ್ಲಿ ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
‘ಕೋಟೆಯ ಹೊರಗಡೆ ಹಾಗೂ ಒಳಗಡೆ ವಾಸ ಮಾಡುವ ಮಾಲೀಕರಿಗೆ ಇ-ಖಾತಾ ವಿತರಿಸುವ ಕುರಿತು ಎಂಟು ತಿಂಗಳಿಂದ ಚರ್ಚೆ ನಡೆಯುತ್ತಿದೆ. ಕಾನೂನು ರೀತಿಯಲ್ಲಿ ಹೇಗೆ ಪರಿಹಾರ ನೀಡಬೇಕು ಎನ್ನುವ ಕುರಿತು ಪರಿಶೀಲಾಗುತ್ತಿದೆ’ ಎಂದು ಹೇಳಿದರು.
‘ಕೋಟೆ ಕಂದಕದ ಪಕ್ಕದಲ್ಲಿ ಮಳಿಗೆಗಳನ್ನು ನಿರ್ಮಿಸಿ ಅಂದಗೆಡಿಸಲಾಗಿದೆ. ಮಹಾನಗರ ಪಾಲಿಕೆ ಹಾಗೂ ಪುರಾತತ್ವ ಇಲಾಖೆಯಿಂದ ಅತಿಕ್ರಮಣ ತೆರವುಗೊಳಿಸಿ ಸ್ಮಾರಕ ಸಂರಕ್ಷಣೆ ಮಾಡಲಾಗುವುದು. ಇದಕ್ಕೆ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
‘ರಾಜ್ಯದಲ್ಲಿ ಸುಮಾರು 800ಕ್ಕೂ ಹೆಚ್ಚು ರಾಜ್ಯ ಸಂರಕ್ಷಿತ ಸ್ಮಾರಕಗಳಿವೆ. ಅದರಲ್ಲಿ ಶೇ 50ರಷ್ಟು ಕಲ್ಯಾಣ ಕರ್ನಾಟಕ ಭಾಗದಲ್ಲಿವೆ. ಇವುಗಳ ಸಂಖ್ಯೆಗೆ ಅನುಗುಣವಾಗಿ ಇನ್ನೂ ಇಲಾಖೆಯಿಂದ ಆದ್ಯತೆ ನೀಡಬೇಕು. ಅದಕ್ಕಾಗಿ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ರಾಯಚೂರಿನ ಕೋಟೆ, ಕಂದಕ, ತೀನ್ ಕಂದಿಲ್ ಸೇರಿದಂತೆ ಇತರೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಐತಿಹಾಸಿಕ ಸ್ಮಾರಕಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
‘ಮಹಾನಗರ ಪಾಲಿಕೆ ಅನುದಾನದಲ್ಲಿ ಕೋಟೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಜೆಸ್ಕಾಂ ಇಲಾಖೆ ಪಕ್ಕದಲ್ಲಿ ಮುಖ್ಯ ಪ್ರವೇಶ ದ್ವಾರ ಮಾಡಲಾಗುವುದು. ಅಲ್ಲದೆ ರಸ್ತೆಯ ಪಕ್ಕದಲ್ಲಿ ಕೋಟೆಯ ಚಿತ್ರವನ್ನು ಬಿಡಿಸಿ ಪ್ರವಾಸಿಗರನ್ನು ಆಕರ್ಷಿಸಲಾಗುವುದು’ ಎಂದರು.
ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ ಮಾತನಾಡಿ, ‘ನಗರಸಭೆಯ ವಾರ್ಡ್ ಸಂಖ್ಯೆ 7, 8, 9 ಹಾಗೂ 11ರಲ್ಲಿ ಹತ್ತು ಸಾವಿರ ಆಸ್ತಿಗಳು ಇವೆ. ಕಂದಕ ಪ್ರದೇಶದಲ್ಲಿ 700 ಹಾಗೂ ವಾರ್ಡ್ 30, 31ರಲ್ಲಿನ ಕೆರೆ ಪ್ರದೇಶದಲ್ಲಿ 1,500 ಆಸ್ತಿಗಳು ಇವೆ. ಇವುಗಳ ಪಹಣಿಯಲ್ಲಿ ಕಲಾತಾಲಾಬ ಎಂದು ಉಲ್ಲೇಖಿಸಲಾಗಿದೆ. ಇ–ಖಾತೆ ನೀಡಲು ತೊಂದರೆ ಆಗುತ್ತಿರುವ ಕಾರಣ ಸೂಕ್ತ ನಿರ್ದೇಶನಕ್ಕೆ ಸರ್ಕಾರಕ್ಕೆ ಕೋರಲಾಗಿದೆ’ ಎಂದು ತಿಳಿಸಿದರು.
ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಸುತ್ತೋಲೆಯ ಹಿನ್ನೆಲೆಯಲ್ಲಿ ಅಧಿಕೃತ ಆಸ್ತಿಗಳಿಗೆ ಎ-ಖಾತಾ ಮತ್ತು ಬಿ-ಖಾತಾ ಪಡೆಯಲು ಅಗತ್ಯ ದಾಖಲಾತಿಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಪೌರ ಸುಧಾರಣಾ ಕೋಶದಿಂದ ರಾಷ್ಟ್ರೀಯ ಸೂಚ್ಯಂಕ ಕೇಂದ್ರದ ಸಹಯೋಗದೊಂದಿಗೆ ಇ-ಆಸ್ತಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.
ರಾಜ್ಯ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕಿ ಮಂಜುಳಾ ಸಿ.ಎನ್, ಪುರಾತತ್ವ ಸಂರಕ್ಷಣಾ ಎಂಜಿನಿಯರ್ ಪ್ರೇಮಲತಾ ಬಿ.ಎಂ., ಎಇಇ ಸತೀಶ್, ಕ್ಯುರೇಟರ್ ಶಿವಪ್ರಕಾಶ ಉಪಸ್ಥಿತರಿದ್ದರು.
ಅಧಿಕಾರಿಗಳ ಮಹತ್ವದ ಸಭೆ
ರಾಯಚೂರು ನಗರದಲ್ಲಿರುವ ಸ್ಮಾರಕಗಳ ಅಭಿವೃದ್ಧಿ ಅತಿಕ್ರಮಣ ಹಾಗೂ ಇ–ಖಾತಾ ವಿಷಯವಾಗಿ ಮಹಾನಗರ ಪಾಲಿಕೆ ಹಾಗೂ ರಾಜ್ಯ ಪುರಾತತ್ವ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿದರು. ಸಭೆಯಲ್ಲಿ ನವರಂಗ ದರ್ವಾಜ್ ಪುರತತ್ವ ಇಲಾಖೆಯ ವಸ್ತು ಸಂಗ್ರಹಾಲಯ ತೀನ್ ಕಂದಿಲ್ ಖಾಸಬಾವಿ ಅಮ್ ತಲಾಬ್ ಮಾವಿನ ಕೆರೆ ಅಭಿವೃದ್ಧಿ ಕುರಿತು ಚರ್ಚಿಸಿದರು. ನಂತರ ಅಧಿಕಾರಿಗಳು ನವರಂಗ್ ದರ್ವಾಜ್ ಕೋಟೆ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.