
ರಾಯಚೂರು: ರಾಜ್ಯಕ್ಕೆ ಬೆಳಕು ಕೊಡುತ್ತಿರುವ ಶಕ್ತಿನಗರ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಕಾರ್ಮಿಕರ ಬದುಕು ದೀಪದ ಕೆಳಗಿನ ಕತ್ತಲೆಯಂತಾಗಿದೆ.
ಆರ್‌ಟಿಪಿಎಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗಾಗಿಯೇ ವಸತಿ ಗೃಹಗಳನ್ನು ನಿರ್ಮಿಸಿದರೂ ಅಧಿಕಾರಿಗಳು ಅವುಗಳನ್ನು ಸರಿಯಾಗಿ ಹಂಚಿಕೆ ಮಾಡದ ಕಾರಣ ಕಾರ್ಮಿಕರು ವಸತಿ ಸೇರಿ ಮೂಲಸೌಕರ್ಯಗಳ ಕೊರತೆ ಎದುರಿಸುವಂತಾಗಿದೆ.
ಆರ್‌ಟಿಪಿಎಸ್‌ನಲ್ಲಿ ಐದು ಸಾವಿರಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 2,000 ಸಾವಿರಕ್ಕಿಂತ ಅಧಿಕ ಗುತ್ತಿಗೆ ಕಾರ್ಮಿಕರೇ ಇದ್ದಾರೆ. ಇವರು ಶಕ್ತಿನಗರದ ಸುತ್ತಮುತ್ತ ಇರುವ ಗ್ರಾಮಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಕನಿಷ್ಠ ಸಂಬಳ ಪಡೆದು ಕೆಲಸ ಮಾಡುವ ಕಾರಣ ಅವರಿಗೆ ಸಾರಿಗೆ, ಮನೆ ಖರ್ಚು ಜೊತೆಯಲ್ಲಿ ಈಗ ಮನೆ ಬಾಡಿಗೆ ವೆಚ್ಚ ಹೊರೆಯಾಗಿ ಪರಿಣಮಿಸಿದೆ.
ಕಾರ್ಮಿಕರಿಗಾಗಿ ನಿರ್ಮಿಸಲಾದ 500ಕ್ಕೂ ಅಧಿಕ ವಸತಿ ಗೃಹಗಳು ನಿರ್ವಹಣೆಯಿಲ್ಲದೆ ಪಾಳು ಬಿದ್ದಿವೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ವಸತಿ ಗೃಹಗಳು ಕಣ್ಣೆದುರೇ ಹಾಳಾಗುತ್ತಿದ್ದರೂ ಅಧಿಕಾರಿಗಳು ಗಂಭೀರವಾಗಿಲ್ಲ. ಕಾರ್ಮಿಕರ ನೆರವಿಗೂ ಬರುತ್ತಿಲ್ಲ. ತಾಂತ್ರಿಕ ನೆಪಗಳನ್ನು ಹೇಳಿ ವಸತಿ ಗೃಹಗಳನ್ನು ಹಾಳುಗೆಡವಿದ್ದಾರೆ.
ವಸತಿ, ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಆರೋಗ್ಯ ಸೌಲಭ್ಯಗಳ ಕೊರತೆ ಕಾರ್ಮಿಕರ ಅಸಮಾಧಾನಕ್ಕೆ ಕಾರಣವಾಗಿದೆ. ವಸತಿ ಗೃಹಗಳನ್ನು ದುರಸ್ತಿಗೊಳಿಸಿ ಪುನಃ ಕಾರ್ಮಿಕರಿಗೆ ಒದಗಿಸಿದರೆ ಕಾರ್ಮಿಕರ ಬಾಡಿಗೆ ಸಮಸ್ಯೆ ನಿವಾರಣೆಯಾಗಲಿದೆ. ಆರ್ಥಿಕ ಹೊರೆಯೂ ಕಡಿಮೆಯಾಗಲಿದೆ. ಸುಲಭವಾಗಿ ಕೆಲಸಕ್ಕೆ ಬಂದು ಹೋಗಲು ಸಾಧ್ಯವಾಗಲಿದೆ ಎಂದು ಕಾರ್ಮಿಕರು ಹೇಳುತ್ತಾರೆ.
ʼಕೆಪಿಸಿಎಲ್ ಕಾರ್ಮಿಕರಿಗಾಗಿಯೇ ನಿರ್ಮಿಸಿದ ವಸತಿ ಗೃಹಗಳು ನಿರ್ವಹಣೆ ಕೊರತೆಯಿಂದಾಗಿ 20 ವರ್ಷಗಳಿಂದ ಪಾಳು ಬಿದ್ದಿವೆ. ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಳ್ಳಲಾರಂಭಿಸಿದೆ. ಬಾಗಿಲು–ಕಿಟಕಿ ಮುರಿದು ಕೊಳೆತಿವೆ’ ಎಂದು ಗುತ್ತಿಗೆ ಕಾರ್ಮಿಕ ರಂಗಾರೆಡ್ಡಿ ಬೇಸರ ವ್ಯಕ್ತಪಡಿಸುತ್ತಾರೆ.
‘ವಸತಿ ಗೃಹಗಳಿಗೆ ಇದ್ದ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ. ಮನೆಗಳ ಆವರಣದಲ್ಲಿ ಮುಳ್ಳು ಕಂಟಿ ಬೆಳೆದಿವೆ. ನಿರ್ಜನ ಪ್ರದೇಶವಾಗಿಯೇ ಗುರುತಿಸಿಕೊಂಡಿರುವ ಕಾರಣ ಅಕ್ರಮ ಚಟುವಟಿಕೆಗಳ ತಾಣವಾಗಿ ರೂಪುಗೊಳ್ಳುತ್ತಿದೆ’ ಎನ್ನುತ್ತಾರೆ.
ಕಾರ್ಖಾನೆ ವ್ಯಾಪ್ತಿಯಲ್ಲಿ 3,000 ಕಾರ್ಮಿಕರ ವಸತಿ ಗೃಹಗಳಿವೆ. ಅದರಲ್ಲಿ 2,000 ವಸತಿ ಗೃಹಗಳಲ್ಲಿ ಕಾಯಂ ಕಾರ್ಮಿಕರು ವಾಸವಾಗಿದ್ದಾರೆ. ಇನ್ನೂ 1,000ಕ್ಕೂ ಹೆಚ್ಚು ವಸತಿ ಗೃಹಗಳು ಖಾಲಿ ಇವೆ. ಅವು ಬಳಸಲು ಯೋಗ್ಯವಾಗಿಲ್ಲ ಎನ್ನುವ ನೆಪ ಹೇಳಿ ಗುತ್ತಿಗೆ ಕಾರ್ಮಿಕರಿಗೆ ಕೊಡಲು ನಿರಕಾರಿಸಲಾಗುತ್ತಿದೆ.
‘ಖಾಲಿ ಇರುವ ಮನೆಗಳನ್ನು ಮೂರು ಪಾಳಿಯಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ನೀಡಿದಲ್ಲಿ, ದೂರದ ಪ್ರಯಾಣ ಕಡಿಮೆಯಾಗಲಿದೆ. ರಾತ್ರಿ ಪಾಳಿಗೆ ಹೋಗುವಾಗ ಹಾಗೂ ಬರುವಾಗ ಅನುಕೂಲವಾಗಲಿದೆ. ಸುತ್ತಮುತ್ತಲಿನ ಪರಿಸರದಲ್ಲಿ ನೈರ್ಮಲ್ಯ ಕಾಪಾಡಲು ಸಾಧ್ಯವಾಗಲಿದೆ. ಕಡಿಮೆ ಬಾಡಿಗೆಯಲ್ಲಿ ಮನೆಗಳನ್ನು ನೀಡಿದರೆ ಆರ್‌ಟಿಪಿಎಸ್ ಕಂಪನಿಗೂ ಆರ್ಥಿಕ ಲಾಭವಾಗಲಿದೆ’ ಎಂದು ಗುತ್ತಿಗೆ ಕಾರ್ಮಿಕರು ಹೇಳುತ್ತಾರೆ.
‘ಆಡಳಿತ ಅಧಿಕಾರಿಗಳು ಗುತ್ತಿಗೆ ಕಾರ್ಮಿಕರ ವಸತಿ ಹಾಗೂ ಮೂಲಸೌಕರ್ಯ ಕೊರತೆ ಸಮಸ್ಯೆಯನ್ನು ಅಧ್ಯಯನ ಮಾಡಿ, ಕಾರ್ಮಿಕರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಪಾಳಿಯಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ವಸತಿ ಸೌಲಭ್ಯ, ಕ್ಯಾಂಟೀನ್, ಟೂ-ಕ್ಯಾನ್ ಸೌಲಭ್ಯ ಹಾಗೂ ಅಗತ್ಯ ಸುರಕ್ಷತಾ ಉಪಕರಣಗಳನ್ನು ಒದಗಿಸಬೇಕು’ ಎಂದು ಮನವಿ ಮಾಡುತ್ತಾರೆ.
‘ಮಾನವೀಯ ನೆಲೆಯಲ್ಲಿ ಯೋಚಿಸಿ’ ‘ಆರ್‌ಟಿಪಿಎಸ್‌ನಲ್ಲಿ ಅಧಿಕಾರಿ ಸಿಬ್ಬಂದಿ ಹಾಗೂ ಕಾರ್ಮಿಕರ ನಿವೃತ್ತಿಯ ನಂತರ ನಿಯಮಿತವಾಗಿ ಹೊಸ ನೇಮಕಾತಿಗಳು ಆಗಿಲ್ಲ. ಹೀಗಾಗಿ ಅನೇಕ ಮನೆಗಳು ಖಾಲಿ ಉಳಿದು ಹಾಳಾಗುತ್ತಿವೆ’ ಎಂದು ಕಾರ್ಮಿಕ ಮುಖಂಡ ಅಯ್ಯಣ್ಣ ಮಹಾಮನಿ ತಿಳಿಸಿದರು. ‘ಕೆಪಿಸಿಎಲ್ ಆಡಳಿತ ಮಂಡಳಿಯವರು ಮಾನವೀಯ ನೆಲೆಯಲ್ಲಿ ತೀರ್ಮಾನ ಕೈಗೊಂಡು ಗುತ್ತಿಗೆ ಕಾರ್ಮಿಕರಿಗೆ ಉಳಿದುಕೊಳ್ಳಲು ಅವಕಾಶ ಮಾಡಿಕೊಡ ಬೇಕು’ ಎಂದು ಒತ್ತಾಯಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.