ADVERTISEMENT

ಶಾಂತಿಯುತ ಹಬ್ಬ ಆಚರಿಸಲು ಪೊಲೀಸ್‌ ಭದ್ರತೆ

ಈದ್ ಮಿಲಾದ್ ಶಾಂತಿ ಸಭೆ: ಡಿಜೆ ಬಳಸಿದರೆ ಕಠಿಣ ಕಾನೂನು ಕ್ರಮ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 12:36 IST
Last Updated 7 ಅಕ್ಟೋಬರ್ 2022, 12:36 IST
ರಾಯಚೂರಿನ ಸದರ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಗುರುವಾರ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಪಿಎಸ್‌ಐ ಗುರುರಾಜ ಕಟ್ಟಿಮನಿ ಮಾತನಾಡಿದರು.
ರಾಯಚೂರಿನ ಸದರ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಗುರುವಾರ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಪಿಎಸ್‌ಐ ಗುರುರಾಜ ಕಟ್ಟಿಮನಿ ಮಾತನಾಡಿದರು.   

ರಾಯಚೂರು: ಸರ್ವರೂ ಸೇರಿ ಶಾಂತಿಯುತವಾಗಿ ಈದ್‌ ಮಿಲಾದ್‌ ಆಚರಣೆ ಮಾಡಿ. ಅದಕ್ಕೆ ಪೊಲೀಸ್‌ ಇಲಾಖೆಯು ಸಂಪೂರ್ಣ ಭದ್ರತೆ ನೀಡುತ್ತದೆ ಎಂದು ಪಿಎಸ್‌ಐ ಗುರುರಾಜ ಕಟ್ಟಿಮನಿ ಹೇಳಿದರು.

ನಗರದ ಸದಾರ ಬಜಾರ್‌ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಮೂರು ವರ್ಷಗಳಿಂದ ಕೊರೊನಾ ಸಂದರ್ಭದಲ್ಲಿ ಯಾವುದೇ ಧರ್ಮದ ಆಚರಣೆಯಾಗಲಿ ಸಮಾರಂಭಗಳಾಗಲಿ ಅದ್ದೂರಿಯಾಗಿ ನಡೆದಿರಲಿಲ್ಲ. ಆದರೆ ಈ ವರ್ಷ ಸರ್ವ ಧರ್ಮಗಳಲ್ಲಿಯೂ ಯಾವುದೇ ಹಬ್ಬ ಹರಿದಿನಗಳಿಗೆ ನಿರ್ಬಂಧವಿಲ್ಲ. ಈಗ ಮುಂಬರುವ ಈದ್ ಮಿಲಾದ್ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ಸರ್ಕಾರ ಅನುಮತಿ ನೀಡುತ್ತದೆ ಎಂದು ಹೇಳಿದರು.

ADVERTISEMENT

ಡಿ.ಜೆ. ಧ್ವನಿವರ್ಧಕವನ್ನು ಕಡ್ಡಾಯವಾಗಿ ನಿರ್ಬಂಧಿಸಿದೆ. ಸರ್ಕಾರದ ಆದೇಶದಂತೆ ಶಾಂತಿ ಸಭೆಯನ್ನು ಕರೆದು, ಸಲಹೆ ಸೂಚನೆ ಕೊಡಲಾಗುತ್ತಿದೆ. ಡಿಜೆ ಧ್ವನಿ ವರ್ಧಕಕ್ಕೆ ಖರ್ಚು ಮಾಡುವ ಹಣವನ್ನೇ ಯಾವುದಾದರೂ ಅನಾಥಾಶ್ರಮಕ್ಕೆ, ಅಂಧ ಮಕ್ಕಳಿಗೆ, ವೃದ್ಧಾಶ್ರಮಕ್ಕೆ, ಬಡ ಕುಟುಂಬಗಳಿಗೆ ಅನ್ನದಾನ, ವಸ್ತ್ರದಾನ, ಹಣ್ಣು ಫಲಗಳನ್ನು ದಾನಮಾಡಿದರೆ ದೇವರು ಮೆಚ್ಚುತ್ತಾನೆ ಎಂದರು.

ಎರಡು ಸ್ಪೀಕರ್ ಧ್ವನಿ ವರ್ಧಕಗಳಿಗೆ ಮಾತ್ರ ಅನುಮತಿ ನೀಡುತ್ತೇವೆ. ಅದರಂತೆ ಯಾವುದೇ ಏರಿಯಾ ಇರಲಿ ಶಾಂತಿ ಭಂಗವಾಗದಂತೆ ರಸ್ತೆಯಲ್ಲಿ ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ಮೆರವಣಿಗೆ ಮಾಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಬಜಾರದಲ್ಲಿ ವ್ಯಾಪಾರಸ್ಥರು ಕೆಲವು ವೃದ್ಧರಿರುತ್ತಾರೆ. ರಾಯಚೂರು ಶಾಂತಿ ಸೌಹಾರ್ಧತೆಯಲ್ಲಿ ರಾಜ್ಯವಲ್ಲದೇ ದೇಶದಲ್ಲೇ ಹೆಸರುವಾಸಿಯಾಗಿದೆ. ಅದನ್ನು ನಾವು ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿದರು.

ಶಾಂತಿ ಸಭೆಯಲ್ಲಿ ಇಸ್ಲಾಂ ಧರ್ಮದ ಹಿರಿಯರು, ಯುವಕರು ಭಾಗವಹಿಸಿದ್ದರು. ಪಿಎಸ್‌ಐಗಳಾದ ಹಮೀದ್, ನರಸಮ್ಮ, ಸಂಗಮೇಶ, ಗುಂಡುರಾವ್ ಎನ್., ನಗರಸಭೆ ನೋಡಲ್‌ ಅಧಿಕಾರಿ ಖಾನ್‌ಸಾಬ್‌, ನಜೀರ್ ಪಂಜಾಬಿ, ಜಹೀರಾ ಸಾಬ್, ಸೈಯದ್ ಇಸ್ಮಾಯಿಲ್, ರಸೂಲ್ ಖಾನ್, ಅಸ್ಲಂ ಪಾಷಾ,

ಸಿರಾಜ್ ಜಾಫ್ರಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.