
ರಾಯಚೂರು: ಮಹಿಳೆಯರ ಅಂದ ಹೆಚ್ಚಿಸುವ ಮತ್ತು ವನಿತೆಯರ ನೆಚ್ಚಿನ ಆಭರಣಗಳನ್ನು ಕೀಟಗಳಿಂದಲೂ ತಯಾರಿಸಬಹುದು ಎಂಬುದನ್ನು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭವಾಗಿರುವ ಕೃಷಿ ಮೇಳದ ‘ಕೀಟ ಪ್ರಪಂಚ’ದಲ್ಲಿ ಬೆಳಕಿಗೆ ಬಂದಿತು.
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಹಾಗೂ ಕೃಷಿ ಮೇಳದ ಪ್ರಯುಕ್ತಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಮಳಿಗೆಯಲ್ಲಿ ಮಿನುಗುವ ಕೀಟಗಳನ್ನು ಒಣಗಿಸಿ ಹೇಗೆ ಅಂದದ ಆಭರಣಗಳನ್ನು ತಯಾರಿಸಬಹುದು ಎನ್ನುವ ಮಾಹಿತಿ ಜನರ ಗಮನ ಸೆಳೆಯಿತು.
ಮಹಿಳೆಯರಿಗೆ ಬಂಗಾರದ ಆಭರಣಗಳೆಂದರೆ ಬಲು ಪ್ರೀತಿ. ಸಾಂಪ್ರದಾಯಿಕ ಒಡವೆ, ಹೊಸ ಯುಗದ ವಿನ್ಯಾದ ಆಭರಗಳನ್ನೂ ಕೀಟಗಳಲ್ಲೇ ರೂಪಿಸಲಾಗಿತ್ತು. ರತ್ನದ ಜೀರುಂಡೆ (ಜ್ಯುವೆಲ್ ಬೀಟಲ್) ಕೀಟ ಪ್ರಪಂಚದ ಆಕರ್ಷಣೆಯಾಗಿತ್ತು.
ಹಳದಿ ಲೋಹದ ಬೆಲೆ ಗಗನಕ್ಕೇರಿದೆ. ಪ್ರಸ್ತುತ 10 ಗ್ರಾಂ ಬಂಗಾರದ ದರ ₹1.50 ಲಕ್ಷ ದಾಟಿದರೆ, ಬೆಳ್ಳಿ ಕೆಜಿಗೆ ₹2.80ಲಕ್ಷ ದಾಟಿದೆ.ಜನ ಸಾಮಾನ್ಯರ ಕೈಗೆಟಕುವ ಬೆಲೆಯಲ್ಲಿ ಚಿನ್ನ ದೊರಕುತ್ತಿಲ್ಲ. ಹೀಗಾಗಿ ಕೀಟಗಳ ಆಭರಣ ಸಿದ್ಧಪಡಿಸಿ ಮಹಿಳೆಯರು ಸಿಂಗಾರ ಮಾಡಿಕೊಳ್ಳಬಹುದು ಎನ್ನುವ ಸಂದೇಶ ಸಹ ಸಾರಲಾಯಿತು.
ಜ್ಯುವೆಲ್ ಬೀಟಲ್ ಜೊತೆಗೆ ಲೇಡಿ ಬರ್ಡ್ ಬೀಟಲ್, ಬಗ್ಸ್, ಲಾಂಗ್ ಆಸ್ಟ್ರೇಟಲ್ ಎಂಬ ಕೀಟಗಳಿಂದಲೂ ಆಭರಣ ವಸ್ತುಗಳನ್ನು ತಯಾರಿಸಬಹುದು ಎಂದು ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಶೀಲಾ ನಾಡಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.