ADVERTISEMENT

ರಾಯಚೂರು: ಮುಂಗಾರಿಗೂ ಮುಂಚೆ ಹೊಸ ತಳಿ ಪರಿಚಯ

ರೈತರಿಗೆ ಮಾಹಿತಿ ಹಂಚಿಕೆ, ಬೀಜ ದಿನಾಚರಣೆಗೂ ಸಿದ್ಧತೆ

ಚಂದ್ರಕಾಂತ ಮಸಾನಿ
Published 22 ಮೇ 2025, 7:44 IST
Last Updated 22 ಮೇ 2025, 7:44 IST
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದಲ್ಲಿ ಬೀಜ ಖರೀದಿಸಿದ ರೈತರು
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದಲ್ಲಿ ಬೀಜ ಖರೀದಿಸಿದ ರೈತರು   

ರಾಯಚೂರು: ಕಲ್ಯಾಣ ಕರ್ನಾಟಕದಲ್ಲಿ ಒಂದು ವಾರದಿಂದ ಅಲ್ಲಲ್ಲಿ ಹದವಾಗಿ ಮಳೆಯಾಗುತ್ತಿದೆ. ರೈತರು ಭೂಮಿ ಹದ ಮಾಡಿಕೊಳ್ಳುವ ಸಂದರ್ಭದಲ್ಲೇ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಮುಖ ಬೆಳೆಗಳ ತಳಿಗಳನ್ನು ರೈತರಿಗೆ ಪರಿಚಯಿಸಿದೆ.

ತೊಗರಿಯ ಟಿಎಸ್‌–3ಆರ್, ಜಿಆರ್‌ಜಿ811 ತಳಿ, ಹೆಸರು–ಬಿಜಿಎಸ್‌9, ಕಡಲೆ–ಬಿಜಿಡಿ103, ಜಿಬಿಎಂ2, ಎಂಎನ್‌ಕೆ1, ಭತ್ತ– ಗಂಗಾವತಿ ಸೋನಾ, ಜಿಎನ್‌ವಿ1089, ಮೆಕ್ಕೆ ಜೋಳ–ಆರ್‌ಸಿಎಂಎಚ್2, ನವಣೆ–ಎಚ್‌ಎನ್‌46, ಜೋಳ– ಜಿಎಸ್‌23, ಹೈಬ್ರೀಡ್‌ ಸೂರ್ಯಕಾಂತಿ–ಆರ್‌ಎಸ್‌ಎಫ್ಎಫ್130, ಶೇಂಗಾ–ಕ–9 ಕೆಡಿಜಿ 128 ತಳಿಗಳನ್ನು ರೈತರಿಗೆ ಕೊಡಲು ಪ್ರಾರಂಭಿಸಿದೆ.

‘ರೈತರರಿಗೆ ಹೊಸ ತಳಿಗಳಾದ ತೊಗರಿ ತಳಿಗಳಾದ ಟಿಎಸ್‌–3ಆರ್, ಜಿಆರ್‌ಜಿ–811, ಜಿಆರ್‌ಜಿ–152 ವಿತರಿಸಲು ಆರಂಭಿಸಲಾಗಿದೆ. ಈಗಾಗಲೇ ಅರ್ಧದಷ್ಟು ಬೀಜ ಹಂಚಿಕೆ ಮಾಡಲಾಗಿದೆ‘ ಎನ್ನುತ್ತಾರೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದ ವಿಶೇಷ ಅಧಿಕಾರಿ ಅರುಣಕುಮಾರ ಹೊಸಮನಿ

ADVERTISEMENT

ಹೊಸ ತೊಗರಿ ತಳಿ ಗುಣಲಕ್ಷಣಗಳು

ಟಿಎಸ್‌–3ಆರ್: ಟಿಎಸ್‌–3ಆರ್ ತೊಗರಿ ತಳಿಯನ್ನು ಕಪ್ಪು ಭೂಮಿಯಲ್ಲಿ 145ರಿಂದ 150 ದಿನಗಳಲ್ಲಿ ಬೆಳೆಯಬಹುದಾಗಿದೆ. ಮಳೆಯಾಶ್ರಿತ, ನೀರಾವರಿ ಅಥವಾ ಕಡಿಮೆ ಆಳದ , ಕಪ್ಪು ಆಳದ ಭೂಮಿಯಲ್ಲೂ ಬೆಳೆಯಬಹುದು.

ಒಣ ಬೇಸಾಯದಲ್ಲಿ ಪ್ರತಿ ಎಕರೆಗೆ 4 ರಿಂದ 5 ಕ್ವಿಂಟಲ್‌ ಇಳುವರಿ ಪಡೆಯಬಹುದಾಗಿದೆ. ನೀರಾವರಿಯಲ್ಲಿ ಪ್ರತಿ ಎಕರೆಗೆ 6ರಿಂದ 7 ಕ್ವಿಂಟಲ್‌ ಬೆಳೆಯುತ್ತದೆ. ನೆಟೆರೋಗ ನಿರೋಧ ಸಾಮರ್ಥ್ಯ ಹೊಂದಿದೆ. ಕೆಂಪು ದಪ್ಪಕಾಳಿನ ಗಾತ್ರ ಹಾಗೂ ಗುಲ್ಯಾಳ ಲೋಕಲ್ ತಳಿಗೆ ಪರ್ಯಾಯ ತಳಿಯಾಗಿದೆ. ಕಾಳಿನ ಗಾತ್ರ ಹಾಗೂತೂಕವೂ ಅಧಿಕ ಇರುತ್ತದೆ.

ಜಿಆರ್‌ಜಿ–811 (ಧರ್ಮರಾಜ):‌ ಜಿಆರ್‌ಜಿ–811 ತಳಿಯು ಆಳವಾದ ಕಪ್ಪು ಭೂಮಿಯಲ್ಲಿ 160ರಿಂದ 165 ದಿನಗಳ ಅವಧಿಯಲ್ಲಿ ಬೆಳೆಯುತ್ತದೆ. ಸೊರಗು ರೋಗ ಹಾಗೂ ಗೊಡ್ಡು ರೋಗ ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ. ಒಣ ಬೇಸಾಯದಲ್ಲಿ ಪ್ರತಿ ಎಕರೆಗೆ 4 ರಿಂದ 5 ಕ್ವಿಂಟಲ್‌ ಇಳುವರಿ ಪಡೆಯಬಹುದಾಗಿದೆ. ನೀರಾವರಿಯಲ್ಲಿ ಪ್ರತಿ ಎಕರೆಗೆ 5ರಿಂದ 6 ಕ್ವಿಂಟಲ್‌ ಬೆಳೆಯುತ್ತದೆ.

ಜಿಆರ್‌ಜಿ–152 (ಭೀಮ): ಆಳವಾದ ಕಪ್ಪು ಮಣ್ಣಿನಲ್ಲಿ 165 ದಿನಗಳಲ್ಲೇ ಬೆಳೆಯುವ ಜಿಆರ್‌ಜಿ–152 ತಳಿಯ ತೊಗರಿ ನೆಟೆರೋಗ ನಿರೋಧಕ, ಗೊಡ್ಡು ರೋಗ ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ. ಈ ತಳಿಯನ್ನು ಬೆಳೆಯುವಾಗ ಸಾಲಿನಿಂದ ಸಾಲಿಗೆ 4 ಅಡಿ ಮತ್ತು ಗಿಡದಿಂದ ಗಿಡಕ್ಕೆ ಒಂದು ಅಡಿ ಅಂತರ ಇಡಬೇಕು. ಎಕರೆಗೆ ಸುಮಾರು 4 ಕೆ‌ಜಿ ಬೀಜ ಬೇಕಾಗುತ್ತದೆ. ಪ್ರತಿ ಎಕರೆಗೆ 5 ರಿಂದ 6 ಕ್ವಿಂಟಲ್‌ ಇಳುವರಿ ಪಡೆಯಬಹುದಾಗಿದೆ. ನೀರಾವರಿಯಲ್ಲಿ ಪ್ರತಿ ಎಕರೆಗೆ 7ರಿಂದ 8 ಕ್ವಿಂಟಲ್‌ ಬೆಳೆಯುತ್ತದೆ.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕ ಪರಿಚಯಿಸಿರುವ ತೊಗರಿ ತಳಿ

‘ವಾರದ ನಂತರ ಬಿತ್ತನೆ ಮಾಡಿ’

‘ಒಂದು ವಾರದ ನಂತರ ಹತ್ತಿ ಹಾಗೂ ಹೆಸರು ಬಿತ್ತನೆ ಮಾಡಬಹುದಾಗಿದೆ. ಜೂನ್‌ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ತೊಗರಿ ಬಿತ್ತನೆಗೆ ಸಕಾಲವಾಗಿದೆ’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಹವಾಮಾನ ಘಟಕದ ತಾಂತ್ರಿಕ ಅಧಿಕಾರಿ ಶಾಂತಪ್ಪ ಧುತ್ತರಗಾಂವಿ ಹೇಳುತ್ತಾರೆ. ‘ಪ್ರಸಕ್ತ ವರ್ಷ ಒಂದು ವಾರ ಮೊದಲೇ ಮುಂಗಾರು ಪ್ರವೇಶ ಮಾಡುವ ಹವಾಮಾನ ಮುನ್ಸೂಚನೆ ಇದೆ. ಈ ವರ್ಷ ಸರಾಸರಿಗಿಂತ ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದೆ. ರೈತರು ಹೊಲದಲ್ಲಿ ನೀರು ನಿಲ್ಲದಂತೆ ಹಾಗೂ ನೀರು ಹರಿದು ಹೋಗುವಂತೆ ಮಾಡಬೇಕು. ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹಿಸಿ ಇಟ್ಟುಕೊಳ್ಳಬೇಕು‘ ಎಂದು ಸಲಹೆ ನೀಡಿದ್ದಾರೆ.

ಹವಾಮಾನ ಮುನ್ಸೂಚನೆ ಪ್ರಕಾರ ಜಿಲ್ಲೆಯಲ್ಲಿ ಮುಂದಿನ ನಾಲ್ಕು ದಿನ ಹಗುರದಿಂದ ಸಾಧಾರಣ ಮಳೆಯಾಗಲಿದ್ದು ಗರಿಷ್ಠ ಉಷ್ಠಾಂಶ 33 ಡಿಗ್ರಿ ಸೆಲ್ಸಿಯಸ್‌ ಇರಲಿದೆ.
–ಶಾಂತಪ್ಪ ಧುತ್ತರಗಾಂವಿ, ಹವಾಮಾನ ಘಟಕದ ತಾಂತ್ರಿಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.