ADVERTISEMENT

ಆಶ್ರಯ ಕಾಲನಿ ನಿವಾಸಿಗಳಿಗೆ ಹಕ್ಕುಪತ್ರ ಕೊಡಿ

ಜಿಲ್ಲಾ ಕಾಂಗ್ರೆಸ್ ಮುಖಂಡರ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 12:15 IST
Last Updated 25 ಜನವರಿ 2021, 12:15 IST
ರಾಯಚೂರಿನ ಟಿಪ್ಪುಸುಲ್ತಾನ ಉದ್ಯಾನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಆಶ್ರಯ ಕಾಲನಿ ನಿವಾಸಿಗಳು ಸೋಮವಾರ ಬೃಹತ್‌ ‍ಪ್ರತಿಭಟನೆ ನಡೆಸಿದರು
ರಾಯಚೂರಿನ ಟಿಪ್ಪುಸುಲ್ತಾನ ಉದ್ಯಾನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಆಶ್ರಯ ಕಾಲನಿ ನಿವಾಸಿಗಳು ಸೋಮವಾರ ಬೃಹತ್‌ ‍ಪ್ರತಿಭಟನೆ ನಡೆಸಿದರು   

ರಾಯಚೂರು: ನಗರದ ಆಶ್ರಯ ಕಾಲನಿಯಲ್ಲಿ ಅನೇಕ ವರ್ಷಗಳಿಂದ ಗುಡಿಸಲು ಹಾಕಿಕೊಂಡು ವಾಸಮಾಡುತ್ತಿರುವ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು‌ ಎಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ನಿವಾಸಿಗಳು ನಗರದ ಟಿಪ್ಪುಸುಲ್ತಾನ್‌‌ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.

ನೂರಾರು ಕಾರ್ಯಕರ್ತರು, ಸ್ಥಳಿಯ ನಿವಾಸಿಗಳೊಂದಿಗೆ ಪ್ರತಿಭಟನೆ ನಡೆಸಿ ಬಿಜೆಪಿ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.30 ವರ್ಷಗಳಿಂದ ನಗರಸಭೆಯ ಜಾಗದಲ್ಲಿ ಬಡ ಕೂಲಿಕಾರ್ಮಿಕರು ಗುಡಿಸಲು ಹಾಕಿಕೊಂಡು ವಾಸಮಾಡುತ್ತಿದ್ದಾರೆ. ನಗರಸಭೆಯಿಂದ 1991- 92ರಲ್ಲಿ ಆಗಿನ ಚುನಾಯಿತ ಮಂಡಳಿಯ ನಿರ್ಧಾರದಂತೆ ಗುಡಿಸಲು ಮತ್ತು ಮನೆಗಳಿಗೆ ಓಓಎಲ್ ನಂಬರ್ ನೀಡಿ ಆಸ್ತಿ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಆದರೆ ಇದುವರೆಗೆ ಗುಡಿಸಲುಗಳಿಗೆ ಯಾವುದೇ ಮಾಲೀಕತ್ವದ ದಾಖಲೆಗಳು ನೀಡಿಲ್ಲ ಎಂದು ಆರೋಪಿಸಿದರು.

ಈಚೆಗೆ ಸುರಿದ ಭಾರಿಮಳೆಯಿಂದಾಗಿ ನಗರದ ಅನೇಕ ಕೊಳಚೆ ಪ್ರದೇಶಗಳು ಜಲಾವೃತಗೊಂಡಿವೆ. ಬಡವರ ಮನೆಗಳಿಗೆ ನೀರು ನುಗ್ಗಿ ದವಸಧಾನ್ಯಗಳು ಕೊಚ್ಚಿಹೋಗಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಜಿಲ್ಲಾಡಳಿತ ಮತ್ತು ಸರ್ಕಾರ ಮನೆ ಬಿದ್ದವರಿಗೆ ₹20 ಸಾವಿರ ಮತ್ತು ನೀರು ನುಗ್ಗಿದ ಮನೆಗಳಿಗೆ ₹ 10,000 ಪರಿಹಾರ ಧನ ನೀಡುವುದಾಗಿ ಶಾಸಕರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ಈವರೆಗೆ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.

ADVERTISEMENT

ಈಗಾಗಲೇ ನಗರಸಭೆ ಇಲಾಖೆ ನಡೆಸಿದ ಸಮೀಕ್ಷೆಯಂತೆ ಸಂತ್ರಸ್ತ ಕುಟುಂಬಗಳಿಗೆ 15 ದಿನಗಳೊಳಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾಡಳಿತ ತಕ್ಷಣ ಪರಿಹಾರ ನೀಡುವಲ್ಲಿ ವಿಫಲವಾಗಿದ್ದಾರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ. ವಿ. ನಾಯಕ, ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸವರಾಜು, ನಗರಸಭೆಯ ಸದಸ್ಯ ಜಯಣ್ಣ, ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು, ಪಕ್ಷದ ಪದಾಧಿಕಾರಿಗಳಾದ ರಾಮಣ್ಣ ಇರಬಗೇರಾ, ಜಿಂದಪ್ಪ, ನರಸಿಂಹಲು ಮಾಡಗಿರಿ, ನಗರಸಭೆಯ ಸದಸ್ಯೆ, ಹೇಮಲತಾ ಬುದೆಪ್ಪ, ಸುನಿಲ್ ಕುಮಾರ, ಮಹಮ್ಮದ್ ಶಾಲಂ, ದರೂರು ಬಸವರಾಜ, ಅಸ್ಲಂ ಪಾಶಾ, ಸಾಜಿದ್‌ ಸಮೀರ್, ಫರೀದ್ ಉಮ್ರಿ ಸೇರಿದಂತೆ ಪಕ್ಷದ ಮುಖಂಡರು, ಆಶ್ರಯ ಕಾಲನಿಯ ನಿವಾಸಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.