ADVERTISEMENT

ತುರ್ವಿಹಾಳ ಪಟ್ಟಣ ಪಂಚಾಯಿತಿ: ಗೆದ್ದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 7:39 IST
Last Updated 31 ಡಿಸೆಂಬರ್ 2021, 7:39 IST
ಸಿಂಧನೂರಿನ ಮಿನಿವಿಧಾನಸೌಧ ಕಚೇರಿಯಲ್ಲಿ ತುರ್ವಿಹಾಳ ಪಟ್ಟಣ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ನಂತರ ಗೆದ್ದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ಚುನಾವಣಾಧಿಕಾರಿ ವಿತರಿಸಿದರು
ಸಿಂಧನೂರಿನ ಮಿನಿವಿಧಾನಸೌಧ ಕಚೇರಿಯಲ್ಲಿ ತುರ್ವಿಹಾಳ ಪಟ್ಟಣ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ನಂತರ ಗೆದ್ದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ಚುನಾವಣಾಧಿಕಾರಿ ವಿತರಿಸಿದರು   

ಸಿಂಧನೂರು:ತಾಲ್ಲೂಕಿನ ತುರ್ವಿಹಾಳ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಒಟ್ಟು 14 ವಾರ್ಡುಗಳ ಸ್ಥಾನಗಳಲ್ಲಿ ಕಾಂಗ್ರೆಸ್ 9, ಬಿಜೆಪಿ 2 ಮತ್ತು ಸ್ವತಂತ್ರವಾಗಿ 3 ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಮಂಜುನಾಥ ಭೋಗಾವತಿ ಘೋಷಿಸಿದರು.

ಇಲ್ಲಿನ ಮಿನಿವಿಧಾನಸೌಧ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿ 9.30 ಗಂಟೆಯೊಳಗೆ ಸಂಪೂರ್ಣವಾಗಿ ಮತ ಎಣಿಕೆ ಕಾರ್ಯ ಪೂರ್ಣಗೊಂಡಿತು. ನಂತರ ಗೆದ್ದ ಎಲ್ಲ ಅಭ್ಯರ್ಥಿಗಳಿಗೆ ತಹಶೀಲ್ದಾರ್ ಮಂಜುನಾಥ ಭೋಗಾವತಿ ಪ್ರಮಾಣ ಪತ್ರ ವಿತರಿಸಿದರು. ಮತ ಎಣಿಕೆ ಕೇಂದ್ರದ ಸುತ್ತಲೂ ಪೊಲೀಸ್‍ರಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಬಾಪುಗೌಡ ದೇವರಮನಿ ಮಾತನಾಡಿ ‘ತುರ್ವಿಹಾಳ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ಆದಾಗ್ಯೂ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಬಿಜೆಪಿ ವಶ ಮಾಡಿಕೊಳ್ಳಲು ಚನಾವಣೆಯಲ್ಲಿ ಕುತಂತ್ರ ನಡೆಸಿದರೂ ಫಲಿಸಲಿಲ್ಲ. ಪ್ರಜ್ಞಾವಂತರಾದ ಮತದಾರರು ಕಾಂಗ್ರೆಸ್‍ಗೆ ಬಹುಮತ ನೀಡಿ ಬಿಜೆಪಿಗೆ ತಕ್ಕ ಪಾಠ ಕಲಿಸಿದೆ. ಈ ಫಲಿತಾಂಶದಿಂದ ಶಾಸಕ ಆರ್.ಬಸನಗೌಡ ಕೈ ಬಲಪಡಿಸಿದಂತಾಗಿದೆ’ ಎಂದರು.

ADVERTISEMENT

ಸಂಭ್ರಮಾಚರಣೆ: ನಗರದ ಮಿನಿವಿಧಾನಸೌಧ ಕಚೇರಿಯಲ್ಲಿ ತುರ್ವಿಹಾಳ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮುಖಂಡ ಆರ್.ಸಿದ್ದನಗೌಡ ತುರ್ವಿಹಾಳ ಹೂಮಾಲೆ ಹಾಕಿ ಅಭಿನಂದಿಸಿದರು. ಬಿಜೆಪಿ ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸಹ ಬಣ್ಣ ಎರಚಿಕೊಂಡು ಸಂಭ್ರಮಾಚರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.