ADVERTISEMENT

ನಾಡಿನ ಏಕೈಕ ಕೊರವಂಜಿ ದೇಗುಲ

ಭತ್ತದ ರಾಶಿಯಂತೆ ಕಂಗೊಳಿಸುವ ಕಲ್ಲು; ಕೊರವಂಜಿಗೆ ಪೂಜಿಸಿದ ನಂತರವೇ ಬಿತ್ತನೆ

ಅಮರೇಶ ನಾಯಕ
Published 11 ಜುಲೈ 2021, 4:17 IST
Last Updated 11 ಜುಲೈ 2021, 4:17 IST
ಗುಂಡಲಬಂಡಿ ಹತ್ತಿರ ಹೀರೆ ಹಳ್ಳದ ಸಮೀಪದ ಇರುವ ಕೊರವಂಜಿ ದೇವಸ್ಧಾನ
ಗುಂಡಲಬಂಡಿ ಹತ್ತಿರ ಹೀರೆ ಹಳ್ಳದ ಸಮೀಪದ ಇರುವ ಕೊರವಂಜಿ ದೇವಸ್ಧಾನ   

ಹಟ್ಟಿಚಿನ್ನದ ಗಣಿ: ಸಮೀಪದ ಗುಂಡಲಬಂಡ ಜಲಪಾತದ ಹತ್ತಿರ ಕಾಗೆಮಡಗು ಗ್ರಾಮದಲ್ಲಿರುವ ಕೊರವಂಜಿಯ ದೇವಸ್ಧಾನ ಬಲು ಅಪರೂಪ ಎನಿಸಿದೆ.

ಸುತ್ತಮುತ್ತಲಿನ ಗ್ರಾಮಗಳರೈತರು ಹಾಗೂ ಸುತ್ತಮುತ್ತಲಿನ ಜನರು ಬಿತ್ತುವ ಮೊದಲು ಕೊರವಂಜಿಗೆ ಪೂಜೆ ಸಲ್ಲಿಸಿ ಕೃಷಿ ಮಾಡುವುದು ವಾಡಿಕೆ. ಎಲ್ಲೆಡೆ ಗ್ರಾಮ ದೇವತೆಗಳಿಗೆ ಪೂಜೆಮಾಡಿ ಕೃಷಿ ಆರಂಭಿಸಿದರೆ, ಇಲ್ಲಿನ ಗ್ರಾಮಗಳ ರೈತರು ಮಾತ್ರ ಕೊರವಂಜಿಗೆ ಪೂಜಿಸಿ ನೇಗಿಲ ಹೂಡುತ್ತಾರೆ.

ಕಾಗೆಮಡಗು ಹೀರೆಹಳ್ಳವು ತಾಲ್ಲೂಕಿನಲ್ಲಿ ಅತಿದೊಡ್ಡ ಹಾಗೂ ಅಪಾಯಕಾರಿ ಹಳ್ಳವಾಗಿತ್ತು. ಈ ಹಿಂದೆ ವಿಶಾಲವಾಗಿ ಹರಿಯುತ್ತಿತ್ತು. ಹಳ್ಳದ ಸುತ್ತಮುತ್ತ ಬೆಳೆಯುತ್ತಿದ್ದ ಈಚಲು ಮರದ ಪರಕಿಯನ್ನು ತೆಗೆದುಕೊಂಡು ಹೋಗಿ, ಬಾರಿಗೆ, ಬುಟ್ಟಿ ಮೊರಗಳನ್ನು ತಯಾರಿಸಿ ಕೊರವಂಜಿ ಬದುಕು ಸಾಗಿಸುತ್ತಿದ್ದರು. ಆನಂತರ ಕೊರವಂಜಿಯನ್ನು ದೇವತೆಯಂದು ಪೂಜಿಸುವುದು ರೂಢಿಗೆ ಬಂತು. ಈ ಭಾಗದಲ್ಲಿ ಕೊರವ ಜನಾಂಗ ಇದ್ದಾರೆ.

ADVERTISEMENT

ನಂಬಿಕೆಯ ಪ್ರಕಾರ,ಕೊರವಂಜಿ ನಿತ್ಯವೂ ವ್ಯಾಪಾರಕ್ಕಾಗಿ ವಿವಿಧ ಊರುಗಳನ್ನು ಸುತ್ತಾಡಿ ವ್ಯಾಪಾರ ಮುಗಿಸಿಕೊಂಡು ತನ್ನ ಮಗುವಿನೊಂದಿಗೆ, ದಾರಿಯಲ್ಲಿ ನಡೆದುಕೊಂಡು ಬರುವಾಗ ತೀವ್ರ ಬಾಯಾರಿಕೆಯಾಗುತ್ತದೆ. ದಾರಿಯ ಪಕ್ಕದ ಹೊಲದಲ್ಲಿ ಗೋಧಿರಾಶಿ ಮಾಡುವವರಿದ್ದು, ಅವರ ಹತ್ತಿರ ನೀರು ಸಿಗಬಹುದೆಂಬ ಬಯಕೆಯಿಂದ ತನ್ನ ಮಗುವಿನೊಂದಿಗೆ ರಾಶಿ ಮಾಡುವವರ ಹತ್ತಿರ ಹೋಗಿ ನೀರು ಬೇಡಿದಳು.

‘ಎಲ್ಲಿಯೂ ನೀರಿಲ್ಲ. ನಾವು ಬಹಳ ಜನ ಇದ್ದೇವೆ. ನಮಗೆ ನೀರು ಸಾಕಾಗುವುದಿಲ್ಲ, ನಿನಗೆಲ್ಲಿಂದ ಕೊಡೋಣ ನಡೆಯಾಚೆ ಎಂದು ಗದರಿಸುತ್ತಾರೆ. ತುಂಬಾ ದಾಹದಲ್ಲಿದ್ದ ಕೊರವಂಜಿ ಇಷ್ಟು ದೂರು ನಡೆದು ಬಂದರೂ ಇವರು ನೀರು ಕೊಡಲಿಲ್ಲವೆಂದು ನೊಂದುಕೊಂಡು ಇವರು ಕಲ್ಲಾಗಲಿ ಎಂದು ಶಪಿಸುತ್ತಾಳಂತೆ, ಮರುಕ್ಷಣವೇ ರಾಶಿಸಹಿತ ಎಲ್ಲವೂ ಕಲ್ಲಾಯಿತು. ಆನಂತರ ಕೊರವಂಜಿ ಹಾಗೂ ಮಗು ಅದೇ ಹೊಲದಲ್ಲಿ ನಡೆದುಕೊಂಡು ಹೋಗುವಾಗ ಬದುವಿನಲ್ಲಿ ಎಡವಿ ಬಿದ್ದು ಮರಣ ಹೊಂದಿದಳು’ ಎನ್ನುವ ಕಥೆ ಜನಜನಿತವಾಗಿದೆ.

ಲಿಂಗಸುಗೂರು ತಾಲ್ಲೂಕಿನ ಸಂತೆಕೆಲ್ಲೂರು ನಡುವೆ ದೊಡ್ಡಹಳ್ಳದ ಮಲ್ಲಪ್ಪ ಗುಡುದೂರು ಅವರ ಜಮೀನಿನಲ್ಲಿ ಇಂದಿಗೂ ನೋಡಲು ರಾಶಿಯಂತೆಯೆ ಕಂಗೊಳಿಸುವ ಕಲ್ಲುಗಳು ಕಾಣ ಸಿಗುತ್ತವೆ. ಈ ರೀತಿಯ ಕಲ್ಲುಗಳು ಬೇರೆಲ್ಲೂ ಕಂಡು ಬರುವುದಿಲ್ಲ ಎನ್ನುವುದು ರೈತರ ವಿಶ್ಲೇಷಣೆ.

ನಾಡಿನ ಜನಪದರಲ್ಲಿ ಕೊರವಂಜಿ ಹೆಸರು ಸಾಕಷ್ಟು ವ್ಯಾಪಕವಾಗಿದೆ. ಆದರೆ, ಇಲ್ಲಿರುವುದು ಏಕೈಕ ಕೊರವ ಜನಾಂಗದವರ ದೇವಸ್ಧಾನ ಎಂಬ ನಂಬಿಕೆ ಇದೆ. ದೂರದ ಊರುಗಳಿಂದ ಕೊರವ ಜನಾಂಗದವರು ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.