ADVERTISEMENT

ತೈಲ ದರ ಏರಿಕೆ ವಿರುದ್ಧ ರಾಯಚೂರಿನಲ್ಲಿ ಜೆಡಿಎಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 12:14 IST
Last Updated 7 ಜುಲೈ 2020, 12:14 IST
ರಾಯಚೂರಿನಲ್ಲಿ ಜಿಲ್ಲಾ ಜೆಡಿಎಸ್‌ ಮುಖಂಡರು ತೈಲ ಬೆಲೆ ಏರಿಕೆ ಮಾಡುತ್ತಿರುವುದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು
ರಾಯಚೂರಿನಲ್ಲಿ ಜಿಲ್ಲಾ ಜೆಡಿಎಸ್‌ ಮುಖಂಡರು ತೈಲ ಬೆಲೆ ಏರಿಕೆ ಮಾಡುತ್ತಿರುವುದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ಪೆಟ್ರೋಲ್ ಮತ್ತು ಡಿಸೇಲ್ ಏರಿಕೆ ಮಾಡಿರುವುದನ್ನು ವಿರೋಧಿಸಿ ಜಿಲ್ಲಾ ಜೆಡಿಎಸ್‌ ಪಕ್ಷದ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಪೆಟ್ರೊಲ್‌ ಬಂಕ್‌ ಪ್ರತಿಕೃತಿಗೆ ಪ್ರಧಾನಿ ಭಾವಚಿತ್ರ ಅಂಟಿಸಿ, ಶ್ರಾದ್ಧ ನೆರವೇರಿಸಿ ಪ್ರತಿಭಟಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಆನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಕೇಂದ್ರ ಸರ್ಕಾರವು ಏಕಾಏಕಿ ಪೆಟ್ರೋಲ್ ದರವನ್ನು ಹೆಚ್ಚಿಸಿ ಜನಸಾಮಾನ್ಯರ ಮೇಲೆ ಹೊರೆ ಹಾಕಿದೆ. ಕೇಂದ್ರದ ಬಿಜೆಪಿ ಸರ್ಕಾರವು ದಿನನಿತ್ಯ ಪದಾರ್ಥಗಳ ಮೇಲೆ ಬೆಲೆ ಏರಿಸಿ ಈಗ ಪೆಟ್ರೋಲ್ ದರವನ್ನು ಭಾರಿ ಹೆಚ್ಚಳ ಮಾಡಿದ್ದು ಸರಿಯಲ್ಲ.ಈಗಾಗಲೇ ಕಳೆದ 4 ತಿಂಗಳಿಂದ ಕೊರೋನಾ ವೈರಸ್ ನಿಂದ ಜನ ಸಮಾನ್ಯರು ಯಾವುದೇ ಉದ್ಯೋಗವಿಲ್ಲದೆ ಕುಟುಂಬ‌ ನಿರ್ವಹಣೆ ಮಾಡುವುದು ಸಂಕಷ್ಟ ಎದುರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ದೂರಿದರು.

ADVERTISEMENT

ಈಗಾಗಲೇ ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲ ದರವು ಡಾಲರ್ ಬೆಲೆಯಲ್ಲಿ ಕಡಿಮೆಯಾಗಿದೆ. ಕೇಂದ್ರ ಸರ್ಕಾರ ಕೆಲ ಖಾಸಗಿ ಕಂಪನಿ ಮತ್ತು ಪೆಟ್ರೋಲ್ ವ್ಯಾಪಾರಿಗಳ ಲಾಭಕ್ಕಾಗಿ ತೈಲ ಬೆಲೆಯನ್ನು ಏರಿಕೆ ಮಾಡಿವೆ. ಪಾಕಿಸ್ತಾನ ಸೇರಿ ಹಲವು ರಾಷ್ಟ್ರಗಳಿಗೆ ಹೋಲಿಸಿದ್ದಲ್ಲಿ ದರವು ತುಂಬಾ ಕಡಿಮೆಯಿದೆ. ಆದರೆ, ಇಲ್ಲಿನ ಸರ್ಕಾರ ತೈಲ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣವೇ ದರ ಇಳಿಕೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತೆ ಎಂದು ಎಚ್ಚರಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ವಿರೂಪಾಕ್ಷಿ, ಮುಖಂಡರಾದ ಖಾಸಿಂ ನಾಯಕ್, ಯುಸೂಫ್ ಖಾನ್, ಶಿವಶಂಕರ್ ವಕೀಲ, ತಿಮ್ಮಾರೆಡ್ಡಿ, ಪವನಕುಮಾರ್‌, ರಾಮಕೃಷ್ಣ, ವಿಶ್ವನಾಥ್ ಶೆಟ್ಟಿ, ದಾನಪ್ಪ ಯಾದವ್, ನರಸಿಂಹಲು, ಆಂಜನೇಯ ಯಾದವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.