
ಸಂಗ್ರಹ ಚಿತ್ರ
ರಾಯಚೂರು: ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಉದ್ಯೋಗ ಮೇಳಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ನಿರ್ದೇಶಕ ಶರಣಬಸವರಾಜ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಜಲ ನಿರ್ಮಲ ಸಭಾಂಗಣದಲ್ಲಿ ಉದ್ಯೋಗ ಮೇಳದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್, ಡಿಡಿಯು-ಜಿಕೆ ಯೋಜನೆಯಡಿ ಉದ್ಯೋಗ ಮೇಳ ಆಯೋಜಿಸಬೇಕಾಗಿದೆ. ಉದ್ಯೋಗ ಮೇಳದ ಅವಧಿಯಲ್ಲಿ ಉದ್ಯೋಗದಾತ ಸುಮಾರು 75 ಸಂಸ್ಥೆಗಳನ್ನು ಆಹ್ವಾನಿಸಬೇಕು. ಮೇಳದಲ್ಲಿ ಕನಿಷ್ಠ 1500 ಜನ ಅಭ್ಯರ್ಥಿಗಳಿಗೆ ಉದ್ಯೋಗವಕಾಶವನ್ನು ಕಡ್ಡಾಯವಾಗಿ ಕಲ್ಪಿಸುವ ಗುರಿಯನ್ನು ನಿಗಧಿಪಡಿಸಬೇಕು’ ಎಂದು ಹೇಳಿದರು.
‘ಮೇಳದ ಎಲ್ಲಾ ಚಟುವಟಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು’ ಎಂದರು.
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಜನವರಿಯಲ್ಲಿ ನಡೆಸಲಾಗುವುದು. ಮೇಳದಲ್ಲಿ ಎಸ್‌ಎಸ್‌ಎಲ್‌ಸಿಯಿಂದ ಮೊದಲುಗೊಂಡು ಪಿಯುಸಿ, ಸಾಮಾನ್ಯ ಪದವಿ, ಡಿಪ್ಲೊಮಾ, ಐಟಿಐ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್ ಕಲಿತವರಿಗೆ ಉದ್ಯೋಗಾವಕಾಶ ಕಲ್ಪಿಸಲು ವೇದಿಕೆ ಸಜ್ಜುಗೊಳಿಸಲಾಗಿದೆ’ ಎಂದು ತಿಳಿಸಿದರು.
‘ರಾಜ್ಯದ ವಿವಿಧ ಜಿಲ್ಲೆಗಳಿಂದ 75 ಉದ್ಯೋಗದಾತರು (ಕಂಪೆನಿಗಳು) ಭಾಗವಹಿಸಲಿದ್ದು, ಆಸಕ್ತ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬೇಕು. ಮೇಳದಲ್ಲಿ ಆಯ್ಕೆಯಾದವರಿಗೆ ಸ್ಥಳದಲ್ಲಿಯೇ ಆಫರ್ ಲೆಟರ್ ಕೊಡಲಿದ್ದಾರೆ’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಧಿಕಾರಿ ವಿಜಯಶಂಕರ, ಸಿಡಾಕ್ ಜಂಟಿ ನಿರ್ದೇಶಕ ಜಿ.ಯು.ಹುಡೇದ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸೋಮಶೇಖರಪ್ಪ ಹೊಕ್ರಾಣಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕ ರಾಜಕುಮಾರ ಪಾಟೀಲ, ಜಿಲ್ಲಾ ಉದ್ಯೋಗಾಧಿಕಾರಿ ನವೀನ್ ಕುಮಾರ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಕಾರ್ಯದರ್ಶಿ ಜಂಬಣ್ಣ, ವಿವಿಧ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಸಭೆಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.