ADVERTISEMENT

ರಾಜ್ಯ ಬಜೆಟ್‌ ಮೇಲೆ ನಿರೀಕ್ಷೆ ಬೆಟ್ಟದಷ್ಟು; ಲಿಂಗಸುಗೂರಿಗೆ ಸಿಗೋದು ಎಷ್ಟು?

ಉಪವಿಭಾಗ ಕೇಂದ್ರ ಸ್ಥಾನವಾಗಿದ್ದರೂ ದೊಡ್ಡ ಹಳ್ಳಿಯಂತಿರುವ ಪಟ್ಟಣ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 6:55 IST
Last Updated 27 ಫೆಬ್ರುವರಿ 2026, 6:55 IST
ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮಟ್ಟ ಎತ್ತರಿಸುವ ಕಾಮಗಾರಿಗೆ ಸಚಿವ ಸಂಪುಟದಲ್ಲಿ ಅನುಮೂಧನೆ ದೊರೆತರೂ ಆರಂಭವಾಗದ ಕಾಮಗಾರಿ
ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮಟ್ಟ ಎತ್ತರಿಸುವ ಕಾಮಗಾರಿಗೆ ಸಚಿವ ಸಂಪುಟದಲ್ಲಿ ಅನುಮೂಧನೆ ದೊರೆತರೂ ಆರಂಭವಾಗದ ಕಾಮಗಾರಿ   

ಲಿಂಗಸುಗೂರು: 2026–2027ನೇ ರಾಜ್ಯ ಬಜೆಟ್‌ ಮೇಲೆ ತಾಲ್ಲೂಕಿನ ಜನತೆ ಬೆಟ್ಟದಷ್ಟು ನಿರೀಕ್ಷೆಯಿಟ್ಟುಕೊಂಡಿದ್ದು ಈ ಬಾರಿಯಾದರೂ ಬಜೆಟ್‌ನಲ್ಲಿ ತಾಲ್ಲೂಕಿನ ಅಭಿವೃದ್ಧಿಗೆ ಪೂರಕ ಯೋಜನೆಗಳು ಸಿಗಬಹುದಾ ಎಂದು ಎದುರು ನೋಡುತ್ತಿದ್ದಾರೆ.

ಉಪವಿಭಾಗ ಕೇಂದ್ರ ಸ್ಥಾನವಾಗಿರುವ ಲಿಂಗಸುಗೂರು ಇನ್ನೂ ದೊಡ್ಡ ಹಳ್ಳಿಯಂತೆಯೇ ಇದೆ. ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಹೀಗಾಗಿ ಪುರಸಭೆ ವ್ಯಾಪ್ತಿಯ ವಿಸ್ತರಣೆಯೊಂದಿಗೆ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಆಶಯ ಇಲ್ಲಿನ ಜನರದ್ದಾಗಿದೆ.

ಪ್ರವಾಸೋದ್ಯಮ: ತಾಲ್ಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ಪಟ್ಟಣದ ಬ್ರಿಟಿಷರ ಕಾಲದ ಕಟ್ಟಡಗಳು, ತಾಲ್ಲೂಕಿನ ಜಲದುರ್ಗ, ಮುದಗಲ್ ಕೋಟೆ, ಬಸವಸಾಗರ ಜಲಾಶಯ, ಅಮರೇಶ್ವರ ಪುಣ್ಯ ಕ್ಷೇತ್ರ, ಗುಂಡ್ಲಬಂಡಾ ಜಲಪಾತ, ನವಲಿ ಜಡೆಯ ಶಂಕರಲಿಂಗೇಶ್ವರ ದೇವಸ್ಥಾನ ಸೇರಿದಂತೆ ಅನೇಕ ಧಾರ್ಮಿಕ ಹಾಗೂ ಪ್ರವಾಸೋದ್ಯಮ ವಿಷಯದಲ್ಲಿ ತಾಲ್ಲೂಕು ಅಷ್ಟೆನೂ ಪ್ರಗತಿ ಸಾಧಿಸಿಲ್ಲ. ಪ್ರವಾಸಿಗರನ್ನು ಸೆಳೆಯಲು ಹಿಂದೆ ಬೀಳುತ್ತಿದೆ. ಹೀಗಾಗಿ ಹೊಸ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಪ್ರವಾಸೋದ್ಯಮವನ್ನು ಪುನಃಶ್ವೇತನಗೊಳಿಸಿ, ಆರ್ಥಿಕ ಸಂಪನ್ಮೂಲ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಿದೆ.

ಮುದಗಲ್‌ನಲ್ಲಿ ನೂರಾರು ಐತಿಹಾಸಿಕ ಸ್ಮಾರಕಗಳು, ಕೋಟೆ, ಬುರುಜು, ಕಂದಕಗಳಿವೆ. ಕೃಷ್ಣಾ ನದಿಯಿಂದ ಸುತ್ತುವರೆದಿರುವ ದ್ವೀಪದ ಜಲದುರ್ಗ ಕೋಟೆ ಅಭಿವೃದ್ಧಿಪಡಿಸಬಹುದು ಎಂಬುದು ಪ್ರವಾಸಿಗರು, ಇತಿಹಾಸತಜ್ಞರ ಅಭಿಪ್ರಾಯ.

ರಸ್ತೆ ಅಭಿವೃದ್ದಿಗೆ ಒತ್ತು: ಲಿಂಗಸುಗೂರು ತಾಲ್ಲೂಕು ವ್ಯಾಪ್ತಿಯಲ್ಲಿ ರಾಜ್ಯ, ಜಿಲ್ಲಾ ಹೆದ್ದಾರಿ ಸೇರಿದಂತೆ ಬಹುತೇಕ ರಸ್ತೆಗಳು ಹಾಳಾಗಿವೆ. ಪಟ್ಟಣದ ಒಳಗಿನ ಕೆಲ ರಸ್ತೆಗಳು ಅಧ್ವಾನವಾಗಿವೆ.

ADVERTISEMENT

ನಾರಾಯಣಪುರ, ಗುಡದನಾಳ, ಮುದಗಲ್, ಶೀಲಹಳ್ಳಿ, ಜಲದುರ್ಗ ಸೇರಿದಂತೆ ಅನೇಕ ರಸ್ತೆಗಳು ಅಭಿವೃದ್ಧಿಗೊಳಿಸಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿ 150ಎ ಹಾದು ಹೋಗಿದ್ದರಿಂದ ವಾಹನಗಳ ಸಂಚಾರ ದಟ್ಟಣೆ ಕಡಿಮೆಗೊಳಿಸುವ ಹಿನ್ನಲೆಯಲ್ಲಿ ಬೈಪಾಸ್ ಅಥವಾ ರಿಂಗ್ ರೋಡ್ ನಿರ್ಮಾಣವಾದರೆ ಪಟ್ಟಣದ ಬೆಳವಣಿಗೆಗೂ ಅನುಕೂಲವಾಗಲಿದೆ ಎನ್ನುವುದು ಜನರ ಅಭಿಪ್ರಾಯವಾಗಿದೆ.

ಸಂಚಾರಿ, ಗ್ರಾಮೀಣ ಠಾಣೆ ಅಗತ್ಯ: ಪಟ್ಟಣವು 12 ಕಿ.ಮೀವರೆಗೆ ಬೆಳೆದು ನಿಂತಿದೆ. ಎಲ್ಲ ರೀತಿಯ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದೆ. ಲಿಂಗಸುಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 58 ಗ್ರಾಮಗಳು, 18 ತಾಂಡಗಳು ಬರಲಿದ್ದು, ಠಾಣಾ ವ್ಯಾಪ್ತಿಯ ಕೊನೆಯ ಗ್ರಾಮ 40 ಕಿ.ಮೀ ದೂರವಿದೆ, ಯಾವುದೇ ದೂರು ನೀಡಲು ಠಾಣೆಗೆ ಬರಬೇಕಾದ ಅನಿವಾರ್ಯತೆ ಇದೆ ಹೀಗಾಗಿ ಪಟ್ಟಣಕ್ಕೆ ಸಂಚಾರಿ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ಮಂಜೂರಾಗಬೇಕು ಎನ್ನುವುದು ಇಲ್ಲಿನ ಜನರ ಬಹುದಿನದ ಬೇಡಿಕೆಯಾಗಿದೆ.

ಹೋಬಳಿ ಸಂಖ್ಯೆ ಹೆಚ್ಚಿಸಿ: ತಾಲ್ಲೂಕಿನಲ್ಲಿ 142 ಹಳ್ಳಿಗಳಿಗೆ ಕೇವಲ ಮೂರೇ ಹೋಬಳಿಗಳಿವೆ, ಹೋಬಳಿ ಕೇಂದ್ರದ ಕೊನೆ ಹಳ್ಳಿ 40-50 ಕಿ.ಮೀ ದೂರವಿರುವುದರಿಂದ ಸುಗಮ ಆಡಳಿತ ಹಾಗೂ ಸಾರ್ವಜನಿಕರಿಗೆ ತೊಂದರೆ ತಪ್ಪಿಸಲು ನಾಗರಾಳ, ಹಟ್ಟಿ, ನಾಗಲಾಪುರ, ಆನಾಹೊಸೂರು, ಮಾವಿನಭಾವಿ ಸೇರಿದಂತೆ ಇನ್ನಿತರ ಗ್ರಾಮಗಳನ್ನು ಹೋಬಳಿ ಕೇಂದ್ರಗಳನ್ನಾಗಿ ಮಾಡಬೇಕು ಎನ್ನುದು ತಾಲ್ಲೂಕಿನ ಜನರ ಒತ್ತಾಯವಾಗಿದೆ.

ಪಟ್ಟಣ ಸೇರಿ ತಾಲ್ಲೂಕಿನಲ್ಲಿ 38 ಸರ್ಕಾರಿ ನೌಕರರ ವಸತಿ ಗೃಹಗಳು ಪಾಳು ಬಿದ್ದು ವಾಸಕ್ಕೆ ಯೋಗ್ಯವಲ್ಲದಾಗಿದ್ದರಿಂದ ಅವುಗಳ ದುರಸ್ತಿಗೆ ಸರ್ಕಾರ ಅನುದಾನ ನೀಡಬೇಕು ಎಂದು ನೌಕರರು ಒತ್ತಾಯಿಸುತ್ತಾರೆ.

ಸ್ಥಳಾಂತರದ ನಿರೀಕ್ಷೆ

ಲಿಂಗಸುಗೂರು ತಾಲ್ಲೂಕಿನ ಕೃಷ್ಣಾ ನದಿಯ ನಡುಗಡ್ಡೆಗಳಾದ ಕರಕಲಗಡ್ಡಿ ಮಾದರಗಡ್ಡಿ ಹೊಂಕಮ್ಮನಗಡ್ಡಿ ನಿವಾಸಿಗಳು ಪ್ರತಿವರ್ಷ ಪ್ರವಾಹದಿಂದ ಅನೇಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಭೂಮಿ ನೀಡಿ ಸ್ಥಳಾಂತರ ಮಾಡುವಂತೆ ಅನೇಕ ವರ್ಷಗಳಿಂದ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡುತ್ತ ಬಂದರೂ ಸ್ಪಂದನೆ ಸಿಗದಾಗಿದೆ.

ಕೃಷ್ಣಾನದಿಯಲ್ಲಿ 1.50 ಲಕ್ಷ ಕ್ಯೂಸೆಕ್ ನೀರು ಹರಿಸಿದರೆ ಮುಳಗಡೆಯಾಗುವ ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮಟ್ಟ ಎತ್ತರಿಸಲು 2025 ಜೂನ್ 19ರಂದು ನಡೆದ ಸಚಿವ ಸಂಪುಟದಲ್ಲಿ ಅನುಮೂದನೆ ದೊರೆತರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ ತಾಲ್ಲೂಕಿನ ಜಾಗಿರ ನಂದಿಹಾಳ ಸೇತುವೆ ನಿರ್ಮಾಣಕ್ಕಾಗಿ 2022ರಲ್ಲಿ 2.50 ಕೋಟಿ ಬಿಡುಗಡೆಯಾಗಿತ್ತು ಆದರೆ ಕಾಮಗಾರಿ ಮಾತ್ರ ಆರಂಭವಾಗುತ್ತಿಲ್ಲ ಎನ್ನುವುದು ಇಲ್ಲಿನ ಜನತೆ ನೋವಾಗಿದೆ.

ಲಿಂಗಸುಗೂರು ಪಟ್ಟಣದಲ್ಲಿ ಒಳಚರಂಡಿ ಯೋಜನೆ

ಮುದಗಲ್ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಹಟ್ಟಿಯಲ್ಲಿ ಎಪಿಎಂಸಿ ಲಿಂಗಸುಗೂರಿನಲ್ಲಿ ಸಂಚಾರಿ ಗ್ರಾಮೀಣ ಠಾಣೆ ಹಾಗೂ ಗುರುಗುಂಟಾಗೆ ಪೊಲೀಸ್ ಠಾಣೆ ನಾಗರಾಳ ಹಾಗೂ ಗುರುಗುಂಟಾ ಬಸ್ ನಿಲ್ದಾಣ ಹೊಸ ಬಸ್ ಗಳು ಮಂಜೂರಾತಿ ರೇಷ್ಮೆ ತಾಂತ್ರಿಕ ತರಬೇತಿ ಕೇಂದ್ರ ಸರ್ಕಾರಿ ನೌಕರರ ವಸತಿ ಗೃಹಗಳ ನಿರ್ಮಾಣ ಮುದಗಲ್ ಹಾಗೂ ಜಲದುರ್ಗ ಕೋಟೆ ಅಭಿವೃದ್ಧಿ ಜೊತೆ ಉತ್ಸವ ಮಾಡಲು ಬಜೆಟ್ ನಲ್ಲಿ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿದೆ.
– ಮಾನಪ್ಪ ವಜ್ಜಲ್, ಲಿಂಗಸುಗೂರು ಶಾಸಕ

ಮುದಗಲ್ ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ₹45 ಕೋಟಿ ಅನುದಾನ

ಮುದಗಲ್ ಜಲದುರ್ಗ ಕೋಟೆ ಅಭಿವೃದ್ಧಿಗೆ ತಲಾ ₹3 ಕೋಟಿ ಪಟ್ಟಣದಲ್ಲಿನ ತಾಯಿ ಮಕ್ಕಳ ಆಸ್ಪತ್ರೆಗೆ ಸಲಕರಣೆಗಾಗಿ ಅನುದಾನ ಕೇಳಿದ್ದನೆ. ಅಮರೇಶ್ವರ ದೇವಸ್ಥಾನಕ್ಕೆ ಪ್ರಾಧಿಕಾರ ರಚಿಸಿ ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ.
– ಶರಣಗೌಡ ಪಾಟೀಲ ಬಯ್ಯಾಪುರ, ವಿಧಾನ ಪರಿಷತ್‌ ಸದಸ್ಯ
ಕಳೆದ ವರ್ಷದ ಬಜೆಟ್‌ನಲ್ಲಿ ಇಲ್ಲಿನ ಲಿಂಗಸುಗೂರು ಉಪವಿಭಾಗ ಆಸ್ಪತ್ರೆಯನ್ನು ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಆದರೆ ಸಿಂಧನೂರಿನ ಶಾಸಕರ ಒತ್ತಡಕ್ಕೆ ಮಣಿದು ಜಿಲ್ಲಾಮಟ್ಟದ ಆಸ್ಪತ್ರೆಯನ್ನು ಅಲ್ಲಿಗೆ ಸ್ಥಳಾಂತರ ಮಾಡಿ ಅನ್ಯಾಯ ಮಾಡಿದೆ.
– ತಿಮ್ಮಾರೆಡ್ಡಿ, ಮುನ್ನೂರು ಹೋರಾಟಗಾರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.