ADVERTISEMENT

ಸಚಿವ ಸಂಪುಟದಲ್ಲಿ ಬದಲಾವಣೆ ಆದರೂ ಆಗಬಹುದು: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 12:47 IST
Last Updated 16 ಜೂನ್ 2025, 12:47 IST
   

ರಾಯಚೂರು: ‘ಪಕ್ಷದ ವರಿಷ್ಠರ ಮೇಲೆ ಹಿರಿಯ ಶಾಸಕರ ಒತ್ತಡ ಇದೆ. ಪಕ್ಷದಲ್ಲಿ ಐದು ಬಾರಿ ಗೆದ್ದವರೂ ಇದ್ದಾರೆ. ನಮಗೂ ಅವಕಾಶ ಕೊಡಿ ಎಂದು ಕೆಲವರು ಕೇಳಿದ್ದಾರೆ. ಹೀಗಾಗಿ ಸಚಿವ ಸಂಪುಟದಲ್ಲಿ ಬದಲಾವಣೆ ಆದರೂ ಆಗಬಹುದು‘ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೇಳಿ ಹೇಳಿದರು.

‘ಸಚಿವ ಸಂಪುಟ ವಿಸ್ತರಣೆ ಮಾಡುವುದು ಬಿಡುವುದು ವರಿಷ್ಠರಿಗೆ ಬಿಟ್ಟ ವಿಚಾರ. ಸಂಪುಟ ವಿಸ್ತರಣೆ ಆಗುತ್ತೋ, ಪುನರ್ ರಚನೆ ಆಗುತ್ತೊ ಎರಡೂ ಗೊತ್ತಿಲ್ಲ. ಯಾವ ವಿಷಯವನ್ನೂ ಮೈಮೇಲೆ ಎಳೆದುಕೊಳ್ಳುವುದಿಲ್ಲ. ನಮ್ಮ ಸ್ಥಾನ ಉಳಿಸಿಕೊಳ್ಳುವುದೇ ಸಾಕಾಗಿದೆ’ ಎಂದು ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ನಮ್ಮಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಮೂವರು ಸಿಎಂ ಬದಲಾದರು. ಮಂತ್ರಿ ಮಂಡಲವೂ ಬದಲಾಯಿತು. ನಮ್ಮಲ್ಲಿ ಏನೂ ಬದಲಾಗಿಲ್ಲ. ಎರಡು ವರ್ಷದಿಂದ ಗಟ್ಟಿಯೇ ಇದೆ‘ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಭವಿಷ್ಯದಲ್ಲಿ ನಾಯಕರನ್ನು ಬೆಳೆಸಲು ಬಿಜೆಪಿಯವರು ಪ್ರಯೋಗ ಮಾಡುತ್ತಾರೆ. ಹೊಸದಾಗಿ ಗೆದ್ದವರನ್ನು ಸಚಿವರನ್ನಾಗಿ ಮಾಡಿದ್ದರು. ನಮ್ಮಲ್ಲಿ ಅಂತಹ ಪ್ರಯೋಗ ನಡೆಯಬೇಕು’ ಎಂದರು.

‘ವಿಧಾನ ಪರಿಷತ್‌ ಸದಸ್ಯರನ್ನು ಸಚಿವರನ್ನಾಗಿ ಮಾಡುವ ವಿಷಯ ಕುರಿತು ನಾನು ಮಾತನಾಡುವುದಿಲ್ಲ. ದೆಹಲಿಗೆ ಹೋದಾಗಲೂ ನಾನು ನನ್ನ ಇಲಾಖೆಗೆ ಸಂಬಂಧಿಸಿದ ವಿಷಯವನ್ನು ಮಾತ್ರ ಮಾತನಾಡಿರುವೆ‘ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.