ADVERTISEMENT

ಕವಿತಾಳ | ಸ್ಮಶಾನ ಜಾಗ ಗೊಂದಲ, ಅಂತ್ಯ ಸಂಸ್ಕಾರಕ್ಕೆ ಅಡ್ಡಿ: ಆರೋಪ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 16:54 IST
Last Updated 28 ಜುಲೈ 2025, 16:54 IST
ಕವಿತಾಳ ಸಮೀಪದ ಆನಂದಗಲ್‌ ಗ್ರಾಮದಲ್ಲಿ ಅಂತ್ಯ ಸಂಸ್ಕಾರಕ್ಕೆ ಗೊಂದಲ ಉಂಟಾದ ಕಾರಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು
ಕವಿತಾಳ ಸಮೀಪದ ಆನಂದಗಲ್‌ ಗ್ರಾಮದಲ್ಲಿ ಅಂತ್ಯ ಸಂಸ್ಕಾರಕ್ಕೆ ಗೊಂದಲ ಉಂಟಾದ ಕಾರಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು   

ಕವಿತಾಳ: ಮಸ್ಕಿ ತಾಲ್ಲೂಕಿನ ಆನಂದಗಲ್‌ ಗ್ರಾಮದಲ್ಲಿ ಸ್ಮಶಾನ ಜಾಗ ಕುರಿತು ಉಂಟಾದ ಗೊಂದಲದಿಂದ ಅಂತ್ಯ ಸಂಸ್ಕಾರಕ್ಕೆ ಪರದಾಡುವಂತಾಗುತ್ತಿದೆ. ಪದೇಪದೆ ಈ ರೀತಿ ಸಮಸ್ಯೆ ಉಂಟಾಗುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮದಲ್ಲಿ ಭಾನುವಾರ ಮೃತಪಟ್ಟ ಭೋವಿ ಸಮಾಜದ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ವ್ಯಕ್ತಿಯೊಬ್ಬರು ಅಡ್ಡಿ ಪಡಿಸಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಕವಿತಾಳ ಠಾಣೆ ಪಿಎಸ್‌ಐ ವೆಂಕಟೇಶ ನಾಯಕ ಮತ್ತು ಗ್ರಾಮ ಆಡಳಿತಾಧಿಕಾರಿ ರವಿ ಅವರು ಜಮೀನು ಮಾಲೀಕರ ಮನವೊಲಿಸಿ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರು.

‘ತಮ್ಮ ಸ್ವಂತ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದು, ಬೆಳೆಗೆ ಹಾನಿಯಾಗುತ್ತದೆ ಎನ್ನುವ ಕಾರಣಕ್ಕೆ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ. ಸ್ಮಶಾನಕ್ಕಾಗಿ ಸರ್ಕಾರ 2 ಎಕರೆ ಪ್ರತ್ಯೇಕ ಜಾಗ ಗುರುತಿಸಿದೆ. ಅಲ್ಲಿ ಅಂತ್ಯಸಂಸ್ಕಾರ ಮಾಡಬೇಕು’ ಎಂದು ಜಮೀನು ಮಾಲೀಕ ಶೇಖರಪ್ಪ ಹೇಳಿದರು.

ADVERTISEMENT
ಕವಿತಾಳ ಸಮೀಪದ ಆನಂದಗಲ್‌ ಗ್ರಾಮದಲ್ಲಿ ಅಂತ್ಯ ಸಂಸ್ಕಾರಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಪಿಎಸ್‌ಐ ವೆಂಕಟೇಶ ನಾಯಕ ಭೇಟಿ ನೀಡಿ ಸ್ಥಳೀಯರ ಜೊತೆ ಚರ್ಚಿಸಿದರು

‘ಸ್ಮಶಾನ ಜಾಗವನ್ನು ಒತ್ತುವರಿ ಮಾಡಲಾಗಿದೆ. ಹೊಸದಾಗಿ ಗುರುತಿಸಿದ 42ನೇ ಸರ್ವೆ ನಂಬರ್‌ ಜಮೀನು ದೂರದಲ್ಲಿದೆ ಮತ್ತು ಅಲ್ಲಿ ಸ್ಮಶಾನಕ್ಕೆ ಪ್ರತ್ಯೇಕ ಜಾಗ ತೋರಿಸಿಲ್ಲ. ಹೀಗಾಗಿ ಅಂತ್ಯ ಸಂಸ್ಕಾರಕ್ಕೆ ಅಡ್ಡಿಪಡಿಸುವುದು ಸರಿಯಲ್ಲ’ ಎಂದು ಭೋವಿ ಸಮಾಜದ ಸಿದ್ದಪ್ಪ ತಿಳಿಸಿದರು.

‘ಸ್ಮಶಾನ ಜಾಗದ ಸರ್ವೆ ಸಂದರ್ಭದಲ್ಲಿ ಮನೆಗಳು ಕಂಡುಬಂದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿದೆ. ಶೀಘ್ರದಲ್ಲಿ ಸ್ಥಳಕ್ಕೆ ತಹಶೀಲ್ದಾರರು ಭೇಟಿ ನೀಡಿ ಸಮಸ್ಯೆ ಪರಿಹರಿಸಲಿದ್ದಾರೆ’ ಎಂದು ಪಾಮನಕಲ್ಲೂರು ಗ್ರಾಮ ಆಡಳಿತಾಧಿಕಾರಿ ರವಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.