ADVERTISEMENT

ಕವಿತಾಳ: ಹದಗೆಟ್ಟ ಹಿರೇಹಣಿಗಿ-ಬಾಗಲವಾಡ ರಸ್ತೆ

ಕಿರಿದಾದ ರಸ್ತೆ–ಸಂಚಾರ ದುಸ್ತರ; ಬೈಕ್‌ ಸವಾರರಿಗೆ ಕಂಟಕ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:43 IST
Last Updated 7 ನವೆಂಬರ್ 2025, 7:43 IST
ಕವಿತಾಳ ಸಮೀಪದ ಹಿರೇಹಣಿಗಿ ಬಾಗಲವಾಡ ಸಂಪರ್ಕಿಸುವ ಮುಖ್ಯ ರಸ್ತೆ ಹಾಳಾಗಿರುವುದು.
ಕವಿತಾಳ ಸಮೀಪದ ಹಿರೇಹಣಿಗಿ ಬಾಗಲವಾಡ ಸಂಪರ್ಕಿಸುವ ಮುಖ್ಯ ರಸ್ತೆ ಹಾಳಾಗಿರುವುದು.   

ಕವಿತಾಳ: ಸಮೀಪದ ಹಿರೇಹಣಿಗಿ ಗ್ರಾಮದಿಂದ ಬಾಗಲವಾಡ ಸಂಪರ್ಕಿಸುವ ಸುಮಾರು 9 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಬೈಕ್‌ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ.

ಕವಿತಾಳ ಪಟ್ಟಣದಿಂದ ಮಾನ್ವಿಗೆ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ಸಾರಿಗೆ ಸಂಸ್ಥೆ ಬಸ್‌, ಶಾಲಾ–ಕಾಲೇಜು ವಾಹನಗಳು ಸೇರಿದಂತೆ ಭತ್ತ ಮತ್ತಿತರ ಸರಕು ಸಾಗಿಸುವ ಭಾರಿ ಗಾತ್ರದ ಲಾರಿಗಳು ನಿತ್ಯ ಸಂಚರಿಸುತ್ತವೆ.

ಡಾಂಬರು ರಸ್ತೆಯಲ್ಲಿ ಬಹುತೇಕ ಕಡೆ ಗುಂಡಿಗಳು ಬಿದ್ದಿವೆ. ರಸ್ತೆ ಬದಿ ತಗ್ಗು ಬಿದ್ದಿರುವುದು ಮತ್ತು ಕಂಕರ್‌ ಹರಡಿದ್ದು, ಎದುರಿಗೆ ಬರುವ ವಾಹನಗಳಿಗೆ ದಾರಿ ಬಿಡಲು ಸಾಧ್ಯವಾಗದಷ್ಟು ಕಿರಿದಾಗಿದೆ.

ADVERTISEMENT

ರಸ್ತೆ ಬದಿ ಮರಂ ಹಾಕದ ಕಾರಣ ಡಾಂಬರು ರಸ್ತೆಯಿಂದ ಬದಿಗೆ ಇಳಿದು ಹೋಗಲು ವಾಹನ ಸವಾರರು ಪರದಾಡಬೇಕಿದೆ. ಡಾಂಬರು ರಸ್ತೆ ಕಿರಿದಾದ ಹಿನ್ನೆಲೆಯಲ್ಲಿ ಎರಡು ವಾಹನಗಳು ಪರಸ್ಪರ ಎದುರಾದರೆ ಪೀಕಲಾಟ ತಪ್ಪಿದ್ದಲ್ಲ ಎನ್ನುವಂತಾಗಿದೆ.

‘ಡಾಂಬರು ರಸ್ತೆ ಕಿರಿದಾಗಿದ್ದು, ದೊಡ್ಡ ಗುಂಡಿಗಳಿವೆ. ನಿರ್ವಹಣೆ ಕೊರತೆಯಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಎದುರಿಗೆ ಬರುವ ವಾಹನಗಳಿಗೆ ದಾರಿ ಬಿಡಲು ಹೋಗಿ ಬೈಕ್‌ ಸವಾರರು ಆಯ ತಪ್ಪಿ ಬೀಳುತ್ತಿದ್ದಾರೆ. ರಾತ್ರಿ ವೇಳೆ ಸಂಚರಿಸಿದರೆ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ’ ಎಂದು ನಾಗರಾಜ ಹಿಂದಿನಮನಿ ಆರೋಪಿಸಿದರು.

‘ಬೈಕ್‌ ಸವಾರರು ಆಯ ತಪ್ಪಿ ಬಿದ್ದು, ಕೈ ಕಾಲು ಮುರಿದುಕೊಳ್ಳುತ್ತಿದ್ದಾರೆ, ರಸ್ತೆ ಬದಿಯಲ್ಲಿ ಮರಂ ಹಾಕಿ ತಾತ್ಕಾಲಿಕ ದುರಸ್ತಿಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ನಿರ್ಲಕ್ಷ್ಯ ಮಾಡಿದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಕರ್ನಾಟಕ ದಸಂಸ ಭೀಮವಾದ ಸಂಘಟನೆ ಜಿಲ್ಲಾ ಸಂಚಾಲಕ ಗಂಗಾಧರ ಬಾಗಲವಾಡ ಮುಖಂಡರಾದ ಮೌನೇಶ ಕೋರಿ, ಜಗದೀಶ ಸಾಲಮನಿ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.