
ಕವಿತಾಳ: ‘ಇಲ್ಲಿಯ ಪೊಲೀಸ್ ಠಾಣೆ ವ್ಯಾಪ್ತಿಗೆ 11 ಗ್ರಾಮ ಪಂಚಾಯಿತಿಗಳ 69 ಹಳ್ಳಿಗಳು ಬರುತ್ತವೆ. ಭೌಗೋಳಿಕ ವಿಸ್ತೀರ್ಣ, ಸಾರಿಗೆ ಸಂಪರ್ಕ ವ್ಯವಸ್ಥೆ, ಶೈಕ್ಷಣಿಕ ಹಾಗೂ ವ್ಯವಹಾರಿಕ ಕೇಂದ್ರವಾದ ಕವಿತಾಳ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಬೇಕು’ ಎಂದು ಕಲ್ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,‘ಬೇಡಿಕೆಗೆ ಸ್ಪಂದಿಸದಿದ್ದರೆ ಉಪವಾಸ ಸತ್ಯಾಗ್ರಹ ಸೇರಿದಂತೆ ತೀವ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.
‘ತಾಲ್ಲೂಕು ಕೇಂದ್ರವಾಗಲು ಅರ್ಹತೆ ಹೊಂದಿದ ಕವಿತಾಳ ಪಟ್ಟಣದ ಬಗ್ಗೆ ಹುಂಡೇಕಾರ ಸಮಿತಿಯಲ್ಲಿ ಪ್ರಸ್ತಾಪಿಸಲಾಗಿದೆ. ರಾಜಕೀಯ ಇಚ್ಛಾಶಕ್ತಿ ಮತ್ತು ಹೋರಾಟದ ಕೊರತೆಯಿಂದ ಬೇಡಿಕೆ ಈಡೇರಿಲ್ಲ. ಇದೀಗ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರ ಬೆಂಬಲ ಪಡೆದು ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಸರ್ಕಾರದ ಮುಂದಿನ ನಡೆ ಅನುಸರಿಸಿ ಹೋರಾಟದ ರೂಪುರೇಷೆ ಸಿದ್ದಪಡಿಸಲಾಗುವುದು’ ಎಂದು ಪ್ರತಿಭಟನಕಾರರು ಹೇಳಿದರು.
ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸ್ಥಳಕ್ಕೆ ಆಗಮಿಸಿದ ಸಿರವಾರ ತಹಶೀಲ್ದಾರ್ ಅಶೋಕ ಪವಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಫಾದರ್ ಆರೋಗ್ಯಪ್ಪ, ಕರಿಯಣ್ಣ ಜಡೆ ಪೂಜಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಿರಲಿಂಗಪ್ಪ, ಮುಖಂಡರಾದ ಬಸ್ಸಪ್ಪ ಕಂದಗಲ್, ಕರಿಯಪ್ಪ ಅಡ್ಡೆ, ಕರೀಂ ಸಾಬ್, ಬಲವಂತರಾಯ ವಟಗಲ್, ಯಮನಪ್ಪ ದಿನ್ನಿ, ಗಂಗಪ್ಪ ದಿನ್ನಿ, ಶರಣಬಸವ ಹಣಿಗಿ, ಮಲ್ಲಿಕಾರ್ಜುನಗೌಡ, ಎಂ.ಡಿ.ಮೆಹಬೂಬ್, ಶಿವಣ್ಣ ವಕೀಲ, ಅಯ್ಯಪ್ಪ ನಿಲೋಗಲ್, ಮೌನೇಶ ಪೂಜಾರಿ, ನಿಂಗಣ್ಣ ತೋಳ, ಮೌನೇಶ್ ಹಿರೇಕುರುಬರ, ಮಲ್ಲಪ್ಪ ಬಸಾಪುರ, ಹನುಮಂತ ಅರಿಕೇರಿ, ಮಲ್ಲಪ್ಪ ರೊಟ್ಟಿ ಮತ್ತು ಯಾಕೂಬ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.