
ಕವಿತಾಳ: ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಖಾಸೀಂ ಬೀ ಚಾಂದ್ ಪಾಶಾ ಅವರು ಈಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನೂತನ ಅಧ್ಯಕ್ಷರ ಆಯ್ಕೆಗೆ ಡಿ.22ರಂದು ಸಮಯ ನಿಗದಿ ಮಾಡಿದ್ದು ರಾಜಕೀಯ ಚಟುವಟಿಕೆಗಳು ಚುರುಕು ಪಡೆದಿವೆ.
15 ತಿಂಗಳ ಅವಧಿಗೆ ಅಧ್ಯಕ್ಷರಾಗಿದ್ದ ಖಾಸೀಂ ಬೀ ಅವರು ಪಕ್ಷದ ಸೂಚನೆಯಂತೆ ವೈಯಕ್ತಿಕ ಕಾರಣ ನೀಡಿ ಕಳೆದ ತಿಂಗಳು ರಾಜೀನಾಮೆ ಸಲ್ಲಿಸಿದ್ದರು. ತೆರವಾದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯೆ ರಾಜೇಶ್ವರಿ ತಿಪ್ಪಯ್ಯಸ್ವಾಮಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಸಮೀಪದ ಗಂಗಾನಗರ ಕ್ಯಾಂಪ್ (74) ಮತ್ತು ಲಕ್ಷ್ಮೀ ನಾರಾಯಣ ಕ್ಯಾಂಪ್ (73) ಸೇರಿದಂತೆ 16 ವಾರ್ಡ್‌ಗಳಲ್ಲಿ ಕಾಂಗ್ರೆಸ್ (8), ಬಿಜೆಪಿ (4), ಜೆಡಿಎಸ್ (3) ಮತ್ತು ಪಕ್ಷೇತರ (1) ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲು ಹೊಂದಿದೆ.
ಬಿಜೆಪಿ, ಜೆಡಿಎಸ್ ಮತ್ತು ಪಕ್ಷೇತರ ಸದಸ್ಯೆ ಸೇರಿ 8 ಜನ ಸದಸ್ಯರು ಮತ್ತು ಕಾಂಗ್ರೆಸ್‌ನ 8 ಸಮಬಲ ಹೊಂದಿದ್ದು, ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಶಾಸಕ ಮತ್ತು ಸಂಸದರು ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸಿ ಖಾಸೀಂಬೀ ಗೆಲುವಿಗೆ ಕಾರಣರಾಗಿದ್ದರು.
ಮೂವರು ಜೆಡಿಎಸ್ ಮತ್ತು ಒಬ್ಬ ಪಕ್ಷೇತರ ಸದಸ್ಯೆ ಬೆಂಬಲ ಪಡೆದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಕುರಿತು ಬಿಜೆಪಿ ಮುಖಂಡರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಸದಸ್ಯರಲ್ಲಿನ ಭಿನ್ನಾಭಿಪ್ರಾಯದ ಲಾಭ ಪಡೆದುಕೊಳ್ಳುವ ಕುರಿತು ಯೋಚಿಸುತ್ತಿರುವ ಬಿಜೆಪಿ ಸದ್ಯಕ್ಕೆ ಕಾಯ್ದು ನೋಡುವ ತಂತ್ರ ಅನುಸರಿಸುತ್ತಿದೆ.
ರಾಜೇಶ್ವರಿ ತಿಪ್ಪಯ್ಯಸ್ವಾಮಿ ಅವರ ಆಯ್ಕೆಗೆ ಮುಕ್ತ ಮನಸ್ಸು ಹೊಂದಿರುವ ಪಕ್ಷದ ಹಿರಿಯ ಮುಖಂಡರು ತಮ್ಮ ಪಕ್ಷದ ಸದಸ್ಯರಿಗೆ ಈಗಾಗಲೇ ಅವರನ್ನು ಬೆಂಬಲಿಸಲು ಸ್ಪಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಸದಸ್ಯರಲ್ಲಿ ಗೊಂದಲವಿಲ್ಲ ಸಚಿವ ಎನ್.ಎಸ್.ಬೋಸರಾಜು ಶಾಸಕ ಜಿ.ಹಂಪಯ್ಯ ನಾಯಕ ಅವರ ಸೂಚನೆಯಂತೆ ರಾಜೇಶ್ವರಿ ತಿಪ್ಪಯ್ಯ ಸ್ವಾಮಿ ಅಧ್ಯಕ್ಷರಾಗುವುದು ಖಚಿತ–ಕಿರಲಿಂಗಪ್ಪ, ಕಾಂಗ್ರೆಸ್ ಮುಖಂಡ
ಕೊನೆ ಕ್ಷಣದವರೆಗೂ ಕಾಯ್ದು ನೋಡಲಾಗುವುದು. ಪಕ್ಷದ ಕಾರ್ಯತಂತ್ರ ಕುರಿತು ಬಹಿರಂಗ ಹೇಳಿಕೆ ನೀಡಲು ಬಯಸುವುದಿಲ್ಲ–ಯಮನಪ್ಪ ದಿನ್ನಿ, ಬಿಜೆಪಿ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.