ADVERTISEMENT

ರಣ ಬಿಸಿಲಿನಲ್ಲೂ ಮಂಡಕ್ಕಿ ಒಗ್ಗರಣೆ, ಮಿರ್ಚಿ ಭಜಿಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 3 ಮೇ 2024, 5:48 IST
Last Updated 3 ಮೇ 2024, 5:48 IST
ಕವಿತಾಳದ ಸೋಮೇಶ್ವರ ಹೋಟೆಲ್‌ ನಲ್ಲಿ ಮಂಡಕ್ಕಿ ಒಗ್ಗರಣೆ ಮತ್ತು ಮಿರ್ಚಿ ಭಜಿ ತಯಾರಿಸಿರುವುದು.
ಕವಿತಾಳದ ಸೋಮೇಶ್ವರ ಹೋಟೆಲ್‌ ನಲ್ಲಿ ಮಂಡಕ್ಕಿ ಒಗ್ಗರಣೆ ಮತ್ತು ಮಿರ್ಚಿ ಭಜಿ ತಯಾರಿಸಿರುವುದು.   

ಕವಿತಾಳ: ರಣ ಬಿಸಿಲಿನಲ್ಲೂ ಜಿಲ್ಲೆಯ ಜನರು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಜನರು ಹೋಟೆಲ್ಗಳಲ್ಲಿ ಮಂಡಕ್ಕಿ ಒಗ್ಗರಣೆ, ಮಿರ್ಚಿ ಭಜಿ ಮತ್ತು ಚಹಾ ಸೇವಿಸುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿವೆ. ಉತ್ತರ ಕರ್ನಾಟಕ ಭಾಗದ ಜನರ ಮೆಚ್ಚಿನ ತಿಂಡಿ ಎನಿಸಿದ ಮಂಡಕ್ಕಿ ಒಗ್ಗರಣೆ ಜತೆಗೆ ಮಿರ್ಚಿ ಭಜಿ ಸವಿದ ಮೇಲೆ ಒಂದು ಕಪ್ ಸುಡು ಸುಡು ಖಡಕ್ ಚಹಾ ಬೇಕೇ ಬೇಕು.

ಪಟ್ಟಣದ ವಿವಿಧ ಹೋಟೆಲ್‌ಗಳಲ್ಲಿ ಬಿಸಿ ಬಿಸಿ ಮಂಡಕ್ಕಿ ಒಗ್ಗರಣೆ, ನಾಲಿಗೆಗೆ ಚುರುಕು ಮುಟ್ಟಿಸುವ ಮಿರ್ಚಿ ಭಜಿ ಮತ್ತು ಖಡಕ್ ಚಹಾ ಗ್ರಾಹಕರನ್ನು ಕೈಬೀಸಿ ಕರೆಯುತ್ತವೆ.

ರಣ ಬಿಸಿಲಿಗೆ ಹೆದರಿದ ಕೆಲವರು ಎಳನೀರು, ತಂಪು ಪಾನೀಯ, ಕಬ್ಬಿನ ಜ್ಯೂಸ್ ಮತ್ತು ಲಸ್ಸಿ ಮೊರೆ ಹೋದರೆ ಹಳ್ಳಿಗಳಿಂದ ಬರುವ ಗ್ರಾಮೀಣ ಜನರು ಮತ್ತು ರೈತಾಪಿ ವರ್ಗದವರು ಬಿಸಿಲನ್ನು ಲೆಕ್ಕಿಸದೆ ಮಂಡಕ್ಕಿ ಒಗ್ಗರಣೆ ಜತೆಗೆ ಮಿರ್ಚಿ ಭಜಿ ಸವಿದು ಮೈಮೇಲಿನ ಬೆವರು ಒರೆಸಿಕೊಳ್ಳುತ್ತಾ ಸುಡು ಸುಡುವ ಖಡಕ್ ಚಹಾ ಸೇವಿಸುವ ಮೂಲಕ ಸಾಂಪ್ರದಾಯಿಕ ತಿಂಡಿಯೇ ಅಚ್ಚು ಮೆಚ್ಚು ಹಾಗೂ ತಾವು ಎಂತಹ ಬಿಸಿಲಿಗೂ, ತಾಪಮಾನಕ್ಕೂ ಜಗ್ಗುವ ಮಂದಿಯಲ್ಲ ಎನ್ನುತ್ತಿದ್ದಾರೆ.

ADVERTISEMENT

ಇಲ್ಲಿನ ಬಹುತೇಕ ಹೋಟೆಲ್‌ಗಳಲ್ಲಿ ಬೆಳಗಿನ ಉಪಹಾರಕ್ಕೆ ಇಡ್ಲಿ, ಚಟ್ನಿ, ಪೂರಿ, ಬಾಂಬೆ ಚಟ್ನಿ ಮತ್ತು ಮಂಡಕ್ಕಿ ಒಗ್ಗರಣೆ, ಮಿರ್ಚಿ ಭಜಿ ಸವಿಯಲು ಗ್ರಾಹಕರು ನಿಂತಿರುತ್ತಾರೆ. ವೆಂಕಟೇಶ ಅವರ ಹೋಟೆಲ್‌ನಲ್ಲಿ ಬೆಳಿಗ್ಗಿಯಿಂದಲೇ ಒಗ್ಗರಣೆ ಮಿರ್ಚಿ ಭಜಿ ಸವಿಯಲು ಹೆಚ್ಚಿನ ಜನರು ಕಾಯ್ದು ನಿಲ್ಲುತ್ತಾರೆ. ಮನೆಗೆ ಪಾರ್ಸಲ್ ತೆಗೆದುಕೊಂಡು ಹೋಗುತ್ತಾರೆ. ಅಮರೇಶ ಅವರ ಹೊಟೇಲ್‌ನಲ್ಲಿ ಇಡ್ಲಿ, ವಡಾ ಮತ್ತು ಮೈಸೂರು ಬೋಂಡಾ ಸವಿಯಲು ಕೆಲ ಸಮಯ ಕಾಯ್ದು ನಿಲ್ಲಬೇಕಾದ ಅನಿವಾರ್ಯತೆ ಇರುತ್ತದೆ.

ʼನಮ್ಮ ಹೋಟೆಲ್‌ಗೆ ಹಳ್ಳಿಗಳಿಂದ ಬರುವ ಬಹುತೇಕ ಗ್ರಾಹಕರ ಮೊದಲ ಆಯ್ಕೆ ಮಿರ್ಚಿ ಭಜಿ ಮತ್ತು ಮಂಡಕ್ಕಿ ಒಗ್ಗರಣೆ. ಬೆಳಿಗಿನ ಉಪಹಾರಕ್ಕೆ ಪೂರಿ, ಇಡ್ಲಿ ಇರುತ್ತದೆ ಮತ್ತು ಸಂಜೆ ಖಾರಾ (ಡಾಣಿ ಮಿಶ್ರಿತ ಹುರಿದ ಮಂಡಕ್ಕಿ) ಮತ್ತು ಭಜಿಯನ್ನು ಗ್ರಾಹಕರು ಹೆಚ್ಚಾಗಿ ಇಷ್ಟಪಡುತ್ತಾರೆ. ಬಿಸಿಲು ಹೆಚ್ಚಿದೆ. ಆದರೆ, ವಹಿವಾಟಿನ ಮೇಲೆ ಪರಿಣಾಮ ಬೀರಿಲ್ಲʼ ಎಂದು ಹೋಟೆಲ್ ಮಾಲೀಕ ಪಂಪಣ್ಣ ಯಾದವ ಮತ್ತು ತಾಯಪ್ಪ ಯಾದವ ಹೇಳಿದರು.

ಕವಿತಾಳದ ಸೋಮೇಶ್ವರ ಹೋಟೆಲ್‌ ನಲ್ಲಿ ಗ್ರಾಹಕರು ಮಂಡಕ್ಕಿ ಒಗ್ಗರಣೆ ಮತ್ತು ಮಿರ್ಚಿ ಭಜಿ ಸವಿಯುತ್ತಿರುವುದು.
ಶಂಕರ ನಾಗಲೀಕರ

ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಅವಲಕ್ಕಿ ಒಗ್ಗರಣೆ ಮತ್ತು ಮಿರ್ಚಿ ಭಜಿ ತಯಾರಿಸುತ್ತೇನೆ 50 ಪ್ಲೇಟ್ ಒಗ್ಗರಣೆ 50 ಪ್ಲೇಟ್ ಮಿರ್ಚಿ ಭಜಿ ಮಾರಾಟವಾಗುತ್ತದೆ. ಬಿಸಿಲಿನಲ್ಲೂ ಗ್ರಾಹಕರು ಒಗ್ಗರಣೆ ಮಿರ್ಚಿ ಸವಿದು ಚಹಾ ಸೇವಿಸುತ್ತಾರೆ

ಶಂಕರ ನಾಗಲೀಕರ ಗಣೇಶ ಟಿಫಿನ್ ಸೆಂಟರ್ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.