ADVERTISEMENT

ಕೆರೆ ಹಬ್ಬ: ಬಾನಲ್ಲಿ ತೇಲಾಡಿದ ಗರುಡ, ಗಿಳಿಗಳ ಹಿಂಡು

ಚಂದ್ರಕಾಂತ ಮಸಾನಿ
Published 4 ಫೆಬ್ರುವರಿ 2026, 5:36 IST
Last Updated 4 ಫೆಬ್ರುವರಿ 2026, 5:36 IST
ರಾಯಚೂರಿನ ಮಾವಿನ ಕೆರೆಯ ಮೇಲೆ ಹಾರಾಡಿದ ಬಣ್ಣದ ಗಿಳಿಗಳನ್ನು ಹೋಲುವ ಗಾಳಿಪಟಗಳು / ಚಿತ್ರ: ಶ್ರೀನಿವಾಸ ಇನಾಂದಾರ್
ರಾಯಚೂರಿನ ಮಾವಿನ ಕೆರೆಯ ಮೇಲೆ ಹಾರಾಡಿದ ಬಣ್ಣದ ಗಿಳಿಗಳನ್ನು ಹೋಲುವ ಗಾಳಿಪಟಗಳು / ಚಿತ್ರ: ಶ್ರೀನಿವಾಸ ಇನಾಂದಾರ್   

ರಾಯಚೂರು: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಮಾವಿನ ಕೆರೆಯ ದಡದಲ್ಲಿ ಹೊಸದಾಗಿ ನಿರ್ಮಿಸಿದ ಉದ್ಯಾನದಲ್ಲಿ ‘ಕೆರೆ ಹಬ್ಬ’ ಅದ್ದೂರಿಯಾಗಿ ನಡೆಯಿತು.

ಮುಸ್ಸಂಜೆಯಲ್ಲಿ ಮಂಗಳೂರು ಹಾಗೂ ಬೆಳಗಾವಿಯಿಂದ ಬಂದಿರುವ ಯುವಕರು ಬೃಹತ್‌ ಹಕ್ಕಿಗಳನ್ನು ಹೋಲುವ ಗಾಳಿಪಟುಗಳನ್ನು ಆಕಾಶದಲ್ಲಿ ಹಾರಿ ಬಿಟ್ಟು ಗಾಳಿಯಲ್ಲಿ ತೇಲಾಡಿಸಿ ಪ್ರೇಕ್ಷಕರ ಮನ ರಂಜಿಸಿದರು.

ಆಫ್ರಿಕನ್‌ ಗಿಳಿಗಳ ಹಿಂಡು ಬಾನಾಡಿಯಲ್ಲಿ ರೆಕ್ಕೆ ಬಿಚ್ಚಿ ಹಾರಾಡಿತು. ಗರುಡ ಪಕ್ಷಿಯೊಂದು ಸರ ಸರನೆ ಆಕಾಶದೆತ್ತರಕ್ಕೆ ಹಾರಿ ಹೋಗಿ ರೆಕ್ಕೆಗಳನ್ನು ಹರಡಿ, ಕೆರೆಯ ಮೇಲೆ ನೆರೆದಿದ್ದ ಜನ ಸಾಗರವನ್ನು ಕುತೂಹಲದಿಂದ ವೀಕ್ಷಿಸಿತು. ಇತರ ಗಾಳಿಪಟಗಳು ಸಹ ಮಕ್ಕಳನ್ನು ಹೆಚ್ಚು ಸೆಳೆದವು.

ADVERTISEMENT

ಮಕ್ಕಳು ಹಲವು ಬಗೆಯ ಐಸ್‌ಕ್ರೀಮ್‌ಗಳನ್ನು ಸವಿಯುತ್ತ ನೀಲಿ ಬಾನಿನಲ್ಲಿ ಸ್ಚಚ್ಚಂದದಿಂದ ಹಾರಾಡಿದ ಗಾಳಿಪಟಗಳನ್ನು ಬೆರಗುಗಣ್ಣಿನಿಂದ ವೀಕ್ಷಿಸಿ ಆನಂದಿಸಿದರು. ಕತ್ತಲಾಗುತ್ತಲೇ ಬಾನಲ್ಲಿ ಹಾರಾಡಿದ ಹಕ್ಕಿಗಳು ಕೆರೆಯ ದಂಡೆಯ ಮೇಲಿಳಿದವು.


ಸಿಡಿಮದ್ದು ಪ್ರದರ್ಶನ:
ಇದೇ ವೇಳೆಗೆ ಕೆರೆ ಅಂಗಳದಲ್ಲಿ ಸಿಡಿಮದ್ದು ಪ್ರದರ್ಶನ ಆರಂಭವಾಯಿತು. ಆಕಾಶದತ್ತ ಚಿಮ್ಮಿದ ರಾಕೆಟ್‌ಗಳು ಬಾನಲ್ಲಿ ಬಣ್ಣದ ಚಿತ್ತಾರ ಮೂಡಿಸಿದವು. ರಾಕೆಟ್‌ಗಳು ಆಕಾಶದತ್ತ ಹಾರಿ ಸಿಡಿದು ಹೂವಿನಂತೆ ಬೆಳಕು ಚೆಲ್ಲುತ್ತಿದ್ದಂತೆಯೇ ಮಕ್ಕಳು ಜೋರಾಗಿ ಕೇಕೆ ಹಾಕಿ ಕೂಗಾಡಿ ಸಂಭ್ರಮಿಸಿದರು.

ಭಾರಿ ಸಂಖ್ಯೆಯಲ್ಲಿ ಮಕ್ಕಳು ತಮ್ಮ ಪಾಲಕರೊಂದಿಗೆ ಕೆರೆ ಅಂಗಳಕ್ಕೆ ಬಂದಿದ್ದರು. ಕೆರೆ ಪಕ್ಕದಲ್ಲಿ ನಿರ್ಮಿಸಿದ ಕಟ್ಟೆ ಮೇಲೆ ಕುಳಿತು ಸಿಡಿಮದ್ದು ಪ್ರದರ್ಶನದ ಆನಂದ ಸವಿದರು. ಹಾಸ್ಟೆಲ್‌ ಮಕ್ಕಳು ಸಹ ಪ್ರದರ್ಶನದಲ್ಲಿ ಪಾಲ್ಗೊಂಡು ಖುಷಿ ಪಟ್ಟರು.

ಇವೆಲ್ಲ ಪ್ರದರ್ಶನ ನಡೆಯುತ್ತಿದ್ದಾಗಲೇ ಅನೇಕ ಮಕ್ಕಳು ಸರತಿ ಸಾಲಿನಲ್ಲಿ ನಿಂತು ಟೆಲಿಸ್ಕೋಪ್‌ನಲ್ಲಿ ಆಕಾಶಕಾಯಗಳ ವೀಕ್ಷಣೆ ಮಾಡಿದರು. ಪ್ರಾದೇಶಿಕ ವಿಜ್ಞಾನ ಕೇಂದ್ರದ ವತಿಯಿಂದ ಆಕಾಶಕಾಯಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಗಣ್ಯರು, ಹಿರಿಯರು ಸಹ ಆಸಕ್ತಿಯಿಂದ ಟೆಲಿಸ್ಕೋಪ್‌ನಲ್ಲಿ ಇಣುಕಿ ಗೃಹಗಳು ಹಾಗೂ ನಕ್ಷತ್ರಗಳ ವೀಕ್ಷಣೆ ಮಾಡಿದರು. ಮಕ್ಕಳು ಹಬ್ಬ ನಡೆಯುತ್ತಿರುವ ಕಾರಣ ಪ್ರಕೃತಿಯೂ ಸಾಥ್‌ ನೀಡಿತು. ಆಕಾಶದಲ್ಲಿ ಮೋಡಗಳು ಇರಲಿಲ್ಲ. ಹೀಗಾಗಿ ನೀಲಿ ಬಾನಿನಲ್ಲಿ ಮಕ್ಕಳು ಸುಲಭವಾಗಿ ಗೃಹಗಳ ವೀಕ್ಷಣೆ ಮಾಡಲು ಸಾಧ್ಯವಾಯಿತು.

ಕೆರೆಯ ಪ್ರವೇಶ ದ್ವಾರದಲ್ಲಿ ಬೃಹತ್‌ ಕೊಕ್ಕರೆ, ಗೊಂಬೆಗಳು ಮಕ್ಕಳು ಸೇರಿದಂತೆ ಪ್ರೇಕ್ಷಕರನ್ನು ಸ್ವಾಗತಿಸಿ ಬರ ಮಾಡಿಕೊಂಡವು. ಕೆಲ ಮಕ್ಕಳು ಕೊಕ್ಕರೆಗಳನ್ನು ಸ್ಪರ್ಶಿಸಿ ಹೊಸ ಅನುಭವ ಪಡೆದರು.

ನಂತರ ವೇದಿಕೆ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮವೂ ನಡೆಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲ ಕಡೆ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಸಂಚಾರ ಒತ್ತಡ ತಡೆಯಲು ಮಾವಿನ ಕರೆ ಹಾಗೂ ಬಸವನಬಾವಿ ಕಡೆ ಹೋಗುವ ಮಾರ್ಗದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.

ರಾಯಚೂರಿನ ಮಾವಿನ ಕೆರೆಯ ಮೇಲೆ ಹಾರಾಡಿದ ಗಾಳಿಪಟದ ಬಣ್ಣದ ಗಿಳಿಗಳು ಒಂದೊಂದಾಗಿ ಆಕಾಶದತ್ತ ಹಾರಿದವು / ಚಿತ್ರ: ಶ್ರೀನಿವಾಸ ಇನಾಂದಾರ್
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಮಾವಿನ ಕೆರೆಯ ದಡದಲ್ಲಿ ಕೆರೆ ಹಬ್ಬಕ್ಕೆ ಜಿಲ್ಲಾಧಿಕಾರಿ ನಿತೀಶ್‌ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಹಾನಗರಪಾಲಿಕೆ ಆಯುಕ್ತ ಜುಬಿನ್‌ ತಹಶೀಲ್ದಾರ್ ಸುರೇಶ ವರ್ಮಾ ಉಪಸ್ಥಿತರಿದ್ದರು
ಮಕ್ಕಳ ಹಬ್ಬದಲ್ಲಿ ಚಿಣ್ಣರನ್ನು ಸ್ವಾಗತಿಸಿದ ಬೃಹತ್‌ ಕೊಕ್ಕರೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.