
ಕವಿತಾಳ: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಯುಪಿಐ ಸ್ಕ್ಯಾನರ್ ಸೇವೆ ಆರಂಭಿಸದ ಕಾರಣ ನಗದು ರಹಿತ ಪ್ರಯಾಣ ಮತ್ತು ಚಿಲ್ಲರೆ ಕಾಸು ನಿರ್ವಹಣೆಗೆ ಪ್ರಯಾಣಿಕರು ಹಾಗೂ ನಿರ್ವಾಹಕರು ಪರದಾಡುವಂತಾಗಿದೆ.
ಯುಪಿಐ ಬಳಕೆ, ಡಿಜಿಟಲ್ ತಂತ್ರಜ್ಞಾನದ ಮೂಲಕ ನಗದು ರಹಿತ ವಹಿವಾಟಿಗೆ ಸರ್ಕಾರಗಳು ಪ್ರೋತ್ಸಾಹ ನೀಡುತ್ತಿವೆ. ರಸ್ತೆ ಬದಿಯ ಪಾನಿಪುರಿ, ಚಹಾ ಮಾರಾಟ ಮಾಡುವವರು ಮತ್ತು ಪಾನ್ ಬೀಡಾ ಅಂಗಡಿಗಳಲ್ಲೂ ಯುಪಿಐ ಬಳಸುತ್ತಿರುವ ಇಂದಿನ ಆಧುನಿಕ ವ್ಯವಸ್ಥೆಯಲ್ಲಿ ಯುಪಿಐ ಸೌಲಭ್ಯವನ್ನು ಒದಗಿಸುವಲ್ಲಿ ಸಂಸ್ಥೆ ಆಸಕ್ತಿ ವಹಿಸದಿರುವುದು ವಿಪರ್ಯಾಸ.
ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ವರ್ಷದ ಹಿಂದೆ ಯೇ ಯುಪಿಐ ಸ್ಕ್ಯಾನರ್ ಸೌಲಭ್ಯ ಒದಗಿಸಲಾಗಿದೆ. ಪ್ರಯಾಣಿಕರು ನಗದು ರಹಿತ ಪ್ರಯಾಣ ಮಾಡುತ್ತಿದ್ದಾರೆ. ಚಿಲ್ಲರೆ ಕಾಸಿನ ಸಮಸ್ಯೆ ಕಡಿಮೆಯಾಗಿದೆ. ಪಾರದರ್ಶಕ ವಹಿವಾಟು ಸಾಧ್ಯವಾಗಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟ ವಾಯುವ್ಯ ಸಾರಿಗೆ ಸಂಸ್ಥೆ ಕ್ಯೂಆರ್ ಕೋಡ್ ವ್ಯವಸ್ಥೆ ಬದಲಿಗೆ ಆಂಡ್ರಾಯ್ಡ್ ಸ್ಮಾರ್ಟ್ ತಂತ್ರಜ್ಞಾನ ಆಧಾರಿತ ಬಾರ್‌ಕೋಡ್ ಜನರೇಟ್ ವ್ಯವಸ್ಥೆ ಜಾರಿಗೆ ಮುಂದಾಗಿದೆ.
ಯುಪಿಐ ಸ್ಕ್ಯಾನರ್ ಬಳಕೆ ಸಂದರ್ಭದಲ್ಲಿ ಪ್ರಯಾಣಿಕರು ತಮ್ಮ ಮೊಬೈಲ್ ಯುಪಿಐ ಆ್ಯಪ್‌ನಲ್ಲಿ ಟಿಕೆಟ್ ಮೊತ್ತ ನಮೂದಿಸಿ ಹಣ ಪಾವತಿ ಮಾಡಬೇಕಾಗುತ್ತದೆ. ಆದರೆ, ಬಾರ್‌ಕೋಡ್ ವ್ಯವಸ್ಥೆಯಲ್ಲಿ ಪ್ರಯಾಣದ ಮಾಹಿತಿ ನೀಡಿ ಟಿಕೆಟ್ ಪಡೆದಾಗ ಪ್ರಯಾಣಿಕನ ಮೊಬೈಲ್ ಆ್ಯಪ್‌ನಲ್ಲಿ ಟಿಕೆಟ್ ಮೊತ್ತ ತೋರಿಸುತ್ತದೆ. ಅದು ಮುಂದಿನ ಪ್ರಕ್ರಿಯೆ ಸುಲಭಗೊಳಿಸುತ್ತದೆ.
‘ನಗದು ರಹಿತ ವ್ಯವಸ್ಥೆಯಲ್ಲಿ ಸಂಚರಿಸಿದ ಮತ್ತು ನಗದು ಹಣ ಹೊಂದಿರದ ಪ್ರಯಾಣಿಕರು ಕೆಕೆಆರ್‌ಟಿಸಿ ಬಸ್ ಹತ್ತಿದಾಗ ಯುಪಿಐ ಸ್ಕ್ಯಾನರ್ ಇಲ್ಲದೆ ಬೆಸ್ತು ಬೀಳುವ ಘಟನೆಗಳು ನಡೆಯುತ್ತಿವೆ. ಚಿಲ್ಲರೆ ಕಾಸಿನ ವಿಷಯದಲ್ಲಿ ಪ್ರಯಾಣಿಕರೊಂದಿಗೆ ನಿತ್ಯ ವಾಗ್ವಾದ ನಡೆಯುತ್ತದೆ. ಸಂಸ್ಥೆ ನಿಯಮದಂತೆ ಹೆಚ್ಚಿನ ಚಿಲ್ಲರೆ ಇಟ್ಟುಕೊಳ್ಳುವಂತಿಲ್ಲ. ಕೆಲವು ಪ್ರಯಾಣಿಕರ ಬಳಿಯೂ ಚಿಲ್ಲರೆ ಇರುವುದಿಲ್ಲ. ಇಂಥ ಸಂದರ್ಭಗಳಲ್ಲಿ ತೀವ್ರ ಸಮಸ್ಯೆಯಾಗುತ್ತದೆ. ಹಲವು ಪ್ರಯಾಣಿಕರು ಸ್ಕ್ಯಾನರ್ ಕೇಳುತ್ತಾರೆ’ ಎಂದು ಹೆಸರು ಹೇಳಲು ಇಚ್ಚಿಸದ ನಿರ್ವಾಹಕರೊಬ್ಬರು ತಮ್ಮ ನಿತ್ಯದ ಅನುಭವ ಬಿಚ್ಚಿಟ್ಟರು.
ಕೆಕೆಆರ್‌ಟಿಸಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಈ ಭಾಗದ ಜನಪ್ರತಿನಿಧಿಗಳ ನಿರುತ್ಸಾಹದಿಂದ ಬೀದರ್, ಕಲ ಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ವಿಜಯಪುರ ಮತ್ತು ವಿಜಯನಗರ ಜಿಲ್ಲೆಗಳ ಪ್ರಯಾಣಿಕರು ನಗದು ರಹಿತ ಪ್ರಯಾಣ ಸೌಲಭ್ಯದಿಂದ ವಂಚಿತರಾಗುವಂತಾಗಿದೆ.
ಪ್ರತಿಕ್ರಿಯೆಗಾಗಿ ‘ಪ್ರಜಾವಾಣಿ’ ಕೆಕೆಆರ್‌ಟಿಸಿ ರಾಯಚೂರು ವಿಭಾಗೀಯ ಅಧಿಕಾರಿ, ಕಲಬುರಗಿಯ ಸಿಟಿಎಂ ಅವರನ್ನು ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ. ಸಹಾಯವಾಣಿಗೆ ಕರೆ ಮಾಡಿದಾಗ ಯುಪಿಐ ವ್ಯವಸ್ಥೆ ಜಾರಿಯಾಗಿಲ್ಲ ಎಂದು ದೃಢಪಡಿಸಿದ್ದಾರೆ.
ಯುಪಿಐ ಬಳಕೆ ಹಿನ್ನೆಲೆಯಲ್ಲಿ ಜೇಬಿನಲ್ಲಿ ನಗದು ಇಟ್ಟುಕೊಳ್ಳುವ ಅಭ್ಯಾಸ ಕ್ರಮೇಣ ಕಡಿಮೆಯಾಗುತ್ತಿದೆ. ತುರ್ತು ಸಂದರ್ಭದಲ್ಲಿ ಬಸ್ ಹತ್ತಿದಾಗ ಸ್ಕ್ಯಾನರ್ ಇಲ್ಲದೆ ಜೇಬು ತಡಕಾಡುವಂತಾಗುತ್ತದೆಎಂ.ಡಿ.ಮೆಹಬೂಬ್ ಕವಿತಾಳ ಕಾರ್ಮಿಕ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.