ADVERTISEMENT

ಕವಿತಾಳ: ಕೆಎಸ್‌ಆರ್‌ಪಿ ಬೆಟಾಲಿಯನ್‌ ಸ್ಥಾಪನೆಗೆ ಪತ್ರ

ಅಗತ್ಯ ಭೂಮಿ ಮತ್ತು ಮೂಲ ಸೌಕರ್ಯ ಒದಗಿಸುವ ಭರವಸೆ: ಸಿಎಂಗೆ ಪತ್ರ

ಎಸ್.ಮಂಜುನಾಥಬಳ್ಳಾರಿ
Published 4 ನವೆಂಬರ್ 2025, 7:41 IST
Last Updated 4 ನವೆಂಬರ್ 2025, 7:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕವಿತಾಳ: ರಾಯಚೂರು ಸಮೀಪದ ಚಂದ್ರಬಂಡ ಹೋಬಳಿ ವ್ಯಾಪ್ತಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯ (ಕೆಎಸ್‌ಆರ್‌ಪಿ) 13ನೇ ಬೆಟಾಲಿಯನ್‌ ಅನ್ನು ಮಸ್ಕಿ ತಾಲ್ಲೂಕಿನ ವಟಗಲ್‌ ಗ್ರಾಮದಲ್ಲಿ ಸ್ಥಾಪಿಸುವಂತೆ ಶಾಸಕ ಆರ್.‌ ಬಸನಗೌಡ ತುರ್ವಿಹಾಳ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಗಲಭೆ ನಿಯಂತ್ರಣ, ಕಾನೂನು ಸುವ್ಯವಸ್ಥೆ ಕಾಪಾಡುವುದು, ವಿಪತ್ತು ನಿರ್ವಹಣೆಯಂತ ವಿಶೇಷ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುವ ಕೆಎಸ್‌ಆರ್‌ಪಿ ರಾಜ್ಯ ಪೊಲೀಸ್‌ ಇಲಾಖೆಯ ಸಶಸ್ತ್ರ ಮೀಸಲು ಪಡೆಯಾಗಿದೆ.

ಘಟಕ ಸ್ಥಾಪನೆಗೆ 70 ಎಕರೆ ಭೂಮಿಯ ಅಗತ್ಯವಿದೆ. ಚಂದ್ರಬಂಡದ ಹತ್ತಿರ 49 ಎಕರೆ ಮಾತ್ರ ಸರ್ಕಾರಿ ಭೂಮಿ ಲಭ್ಯವಿದೆ. ಆದ ಕಾರಣ ಯೋಜನೆ ಜಿಲ್ಲೆಯ ಕೈ ತಪ್ಪುವ ಆತಂಕ ಇದೆ. ಆದ್ದರಿಂದ ವಟಗಲ್‌ ಹತ್ತಿರ ಬೆಟಾಲಿಯನ್‌ ಸ್ಥಾಪಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ADVERTISEMENT

‘ಮಸ್ಕಿ ತಾಲ್ಲೂಕಿನ ವಟಗಲ್‌ ಗ್ರಾಮದ ಸರ್ವೆ ನಂ–25ರಲ್ಲಿ 150 ಎಕರೆ ಸರ್ಕಾರಿ ಭೂಮಿ ಲಭ್ಯವಿದೆ. ಬೆಟಾಲಿಯನ್‌ ಸ್ಥಾಪನೆಗೆ ಅಗತ್ಯವಾದ 70 ಎಕರೆ ಭೂಮಿ ಬಳಸಿಕೊಳ್ಳಬಹುದು.

ಎರಡು ವಸತಿ ಶಾಲೆಗಳು ಸೇರಿ ಸರ್ಕಾರಿ ಶಾಲೆಗಳಿವೆ. 5 ಕಿ.ಮೀ ಅಂತರದ ಕವಿತಾಳದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಶಾಲಾ–ಕಾಲೇಜುಗಳಿವೆ.

ಲಿಂಗಸುಗೂರು (25 ಕಿ.ಮೀ), ಮಾನ್ವಿ (45 ಕಿ.ಮೀ), ಸಿಂಧನೂರು (40 ಕಿ.ಮೀ), ದೇವದುರ್ಗ (45 ಕಿ.ಮೀ) ಮತ್ತು ಜಿಲ್ಲಾ ಕೇಂದ್ರ ರಾಯಚೂರು 60 ಕಿ.ಮೀ ಅಂತರದಲ್ಲಿದೆ.

ಪೊಲೀಸ್‌ ಸಿಬ್ಬಂದಿ ಮಕ್ಕಳಿಗೆ ಶೈಕ್ಷಣಿಕ ಹಾಗೂ ಆರೋಗ್ಯ ಸೇವೆಗಳು ಸಿಗುತ್ತವ. ಉದ್ದೇಶಿತ ಸ್ಥಳ ರಾಷ್ಟ್ರೀಯ ಹೆದ್ದಾರಿ 748 (ಎ) ಮತ್ತು ರಾಜ್ಯ ಹೆದ್ದಾರಿ 20ಕ್ಕೆ ಹತ್ತಿರದಲ್ಲಿದೆ. ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

‘ಉನ್ನತ ಮಟ್ಟದ ಅಧಿಕಾರಿಗಳು ಸೇರಿದಂತೆ ನೂರಾರು ಸಿಬ್ಬಂದಿಯನ್ನು ಹೊಂದಿದ ಬೆಟಾಲಿಯನ್‌ ಸ್ಥಾಪನೆಯಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಸಹಕಾರಿಯಾಗಲಿದೆ. ಸ್ಥಳೀಯರಿಗೆ ಸಣ್ಣ ಪುಟ್ಟ ಕೆಲಸಗಳು ಲಭಿಸುತ್ತವೆ. ವ್ಯಾಪಾರ ವಹಿವಾಟು ಹೆಚ್ಚುತ್ತದೆ ಮತ್ತು ಶಾಲಾ–ಕಾಲೇಜು ಸೇರಿ ಈ ಭಾಗದ ಅಭಿವೃದ್ದಿಗೆ ಪೂರಕವಾಗಲಿದೆ’ ಎಂದು ಕಾಂಗ್ರೆಸ್‌ ಮುಖಂಡ ಬಲವಂತರಾಯ ವಟಗಲ್‌ ಹೇಳಿದರು.

ಬೆಟಾಲಿಯನ್‌ ಸ್ಥಾಪನೆಗೆ ಸಿ.ಎಂ ಗೃಹ ಸಚಿವರಿಗೆ ಮನವಿ ಮಾಡಲಾಗಿದೆ. ಅಧಿಕಾರಿಗಳ ಹಂತದಲ್ಲಿ ಚರ್ಚಿಸಿ ಪ್ರಯತ್ನಿಸಲಾಗುವುದು
–ಆರ್.‌ಬಸನಗೌಡ ತುರ್ವಿಹಾಳ, ಶಾಸಕ ಮಸ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.