ADVERTISEMENT

ದೇವತಗಲ್ ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆ

ಮಂಜುನಾಥ ಎನ್ ಬಳ್ಳಾರಿ
Published 1 ಜನವರಿ 2024, 6:09 IST
Last Updated 1 ಜನವರಿ 2024, 6:09 IST
ಕವಿತಾಳ ಸಮೀಪದ ದೇವತಗಲ್ ಗ್ರಾಮದಲ್ಲಿ ರಸ್ತೆಯಲ್ಲಿ ನೀರು ಹರಿದು ಗಲೀಜು ಉಂಟಾಗಿರುವುದು.
ಕವಿತಾಳ ಸಮೀಪದ ದೇವತಗಲ್ ಗ್ರಾಮದಲ್ಲಿ ರಸ್ತೆಯಲ್ಲಿ ನೀರು ಹರಿದು ಗಲೀಜು ಉಂಟಾಗಿರುವುದು.   

ಕವಿತಾಳ: ಬಲ್ಲಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವತಗಲ್ ಗ್ರಾಮದಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಮತ್ತು ಸ್ವಚ್ಚತೆ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ. 1500 ಜನಸಂಖ್ಯೆ ಹೊಂದಿದ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಮೂವರು ಸದಸ್ಯರಿದ್ದಾರೆ. ಎರಡು ಕೊಳವೆಬಾವಿಗಳಿಂದ ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಓಣಿಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದರೂ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಮೇಲೆ ನೀರು ಹರಿದು ಗಲೀಜು ಉಂಟಾಗುತ್ತಿದೆ.

ಗ್ರಾಮದ ಅಗಸಿ ಹತ್ತಿರ ಮತ್ತು ಜನತಾ ಕಾಲೊನಿಯಲ್ಲಿ ಬಟ್ಟೆ ಮತ್ತು ಪಾತ್ರೆ ತೊಳೆದ ನೀರು, ಬಚ್ಚಲು ನೀರು ರಸ್ತೆಯಲ್ಲಿ ನಿಂತು ಕೆಸರು ಗದ್ದೆಯಂತಾಗಿದೆ. ಗಲೀಜು ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಿದ್ದು, ಸುತ್ತಮುತ್ತ ವಾಸಿಸುವ ಕುಟುಂಬಗಳ ನಿದ್ದೆಗೆಡಿಸಿವೆ.

‘ಹಗಲು ಹೊತ್ತಿನಲ್ಲಿ ಜಮೀನಿಗೆ ಕೆಲಸಕ್ಕೆ ಹೋಗುತ್ತೇವೆ. ಸಂಜೆ ಮನೆಗೆ ಬಂದರೆ ಗಲೀಜು ವಾತಾವರಣದಿಂದ ಗಬ್ಬು ವಾಸನೆ ಮತ್ತು ಸೊಳ್ಳೆಗಳ ಕಾಟದಿಂದ ನೆಮ್ಮದಿಯಾಗಿ ನಿದ್ರೆ ಮಾಡುವಂತಿಲ್ಲ. ಹೆಚ್ಚಿದ ಸೊಳ್ಳೆ ಕಾಟದಿಂದ ಜನ ಜಾನುವಾರುಗಳು ಚಡಪಡಿಸುವಂತಾಗಿದೆ’ ಎಂದು ಲಕ್ಷ್ಮೀ, ನಾಗಮ್ಮ ಮತ್ತು ಕೃಷ್ಣಮ್ಮ ಅಳಲು ತೋಡಿಕೊಂಡರು.

ADVERTISEMENT

ಗ್ರಾಮಕ್ಕೆ ಬೆಳಿಗ್ಗೆ ಮತ್ತು ಸಂಜೆ ದಿನದಲ್ಲಿ ಎರಡು ಬಾರಿ ಬಸ್ ಬಂದರೂ ಲಿಂಗಸುಗೂರು, ಸಿರವಾರ ಮತ್ತು ಕವಿತಾಳ ಪಟ್ಟಣಗಳಿಗೆ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಗೊಲ್ದಿನ್ನಿ ಕ್ರಾಸ್‌ವರೆಗೆ ಅಂದಾಜು 3 ಕಿ.ಮೀ ಕಾಲ್ನಡಿಗೆ ಅನಿವಾರ್ಯವಾಗಿದೆ.

‘ಗ್ರಾಮಕ್ಕೆ ಬೆಳಿಗ್ಗೆ 6 ಗಂಟೆಗೆ ಬಸ್ ಬರುವುದರಿಂದ ಮಕ್ಕಳಿಗೆ ಅನುಕೂಲವಾಗುತ್ತಿಲ್ಲ. ದೇವತಗಲ್ ಮತ್ತು ಗೊಲ್ದಿನ್ನಿ ಗ್ರಾಮಗಳಿಂದ ಅಂದಾಜು 40 ವಿದ್ಯಾರ್ಥಿಗಳು ನಿತ್ಯ ಶಾಲಾ ಕಾಲೇಜಿಗೆ ಹೋಗುತ್ತಾರೆ. ಶಾಲೆಗೆ ಹೋಗುವಾಗ ಮತ್ತು ಸಂಜೆ ಮನೆಗೆ ಬರುವಾಗ ನಿತ್ಯ ನಡೆದುಕೊಂಡು ಬರುತ್ತಾರೆ. ಶಾಲಾ, ಕಾಲೇಜು ಸಮಯಕ್ಕೆ ಸರಿಯಾಗಿ ಬಸ್ ಓಡಿಸಿದರೆ ಅನುಕೂಲವಾಗುತ್ತದೆ’ ಎಂದು ಗ್ರಾಮದ ದೇವರಾಜ ಇಳಿಗೇರ ಮತ್ತು ಬಾಲರಾಜ ನಾಯಕ ಹೇಳಿದರು.

ಕಾಂಕಿಟ್ ರಸ್ತೆ ನಿರ್ಮಿಸುವಾಗಲೇ ಸ್ವಲ್ಪ ಎತ್ತರಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಗಮನಹರಿಸಲಿಲ್ಲ. ಈಗ ರಸ್ತೆಯಲ್ಲಿ ನೀರು ನಿಂತು ಗಲೀಜು ಉಂಟಾಗುತ್ತಿದೆ. ಓಣಿಗಳಲ್ಲಿ ಚರಂಡಿ ನಿರ್ಮಾಣ ಮತ್ತು ಸರ್ಕಾರಿ ಶಾಲೆಗೆ ಕಾಂಪೌಂಡ್ ನಿರ್ಮಾಣ ಮಾಡುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಕರವೇ ಮುಖಂಡ ವೆಂಕಟೇಶ ಶಂಕ್ರಿ ಆರೋಪಿಸಿದರು.

’ಹಿರಿಯ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸ್ಥಳೀಯರೊಂದಿಗೆ ಚರ್ಚಿಸಿದರೆ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು, ಮಾಹಿತಿ ನೀಡಿದರೂ ಸ್ಪಂದಿಸದಿರುವುದು ವಿಪರ್ಯಾಸʼ

ವೆಂಕಟೇಶ ಶಂಕ್ರಿ ದೇವತಗಲ್‌, ಕರವೇ ಮುಖಂಡ

ಕವಿತಾಳ ಸಮೀಪದ ದೇವತಗಲ್ ಗ್ರಾಮದಲ್ಲಿ ರಸ್ತೆಯಲ್ಲಿ ನೀರು ಹರಿದು ಗಲೀಜು ಉಂಟಾಗಿರುವುದು.
ವೆಂಕಟೇಶ ಶಂಕ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.