ADVERTISEMENT

ಭೂಹೀನರಿಗೆ ಜಮೀನು, ನಿವೇಶನ ಕೊಡಿ: ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 6:33 IST
Last Updated 22 ನವೆಂಬರ್ 2025, 6:33 IST
ಸಿಂಧನೂರಿನಲ್ಲಿ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಸಿಂಧನೂರಿನಲ್ಲಿ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಸಿಂಧನೂರು: ತಾಲ್ಲೂಕಿನಲ್ಲಿ ಅನೇಕ ವರ್ಷಗಳಿಂದ ಹೆಚ್ಚುವರಿ ಜಮೀನು ಸಾಗುವಳಿ ಮಾಡಿಕೊಂಡು ಬಂದಿರುವ, ಅಲ್ಲದೆ ಫಾರಂ ನಂ.51, 53, 57 ಮತ್ತು 94ಸಿ ಸಲ್ಲಿಸಿರುವ ಭೂಹೀನ ರೈತರಿಗೆ ಜಮೀನು ಹಂಚಿಕೆ ಮಾಡಬೇಕು. ನಿವೇಶನ ರಹಿತರಿಗೆ ನಿವೇಶನ, ಮನೆ ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಪದಾಧಿಕಾರಿಗಳು ಶುಕ್ರವಾರ ಇಲ್ಲಿಯ ಪ್ರವಾಸಿ ಮಂದಿರದಿಂದ ಮಿನಿವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

‘ಪರಂಪೋಕು, ಗೈರಾಣಾ, ಗಾಂವಠಾಣಾ ಹೆಚ್ಚುವರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ಭೂಹೀನರಿಗೆ ಅವುಗಳನ್ನು ಮಂಜೂರು ಮಾಡಲು ಫಾರಂ ನಂ.51, 53, 57 ಮತ್ತು 94ಸಿ ಅರ್ಜಿಗಳನ್ನು ಸಲ್ಲಿಸುವಂತೆ ಸರ್ಕಾರ ಆದೇಶಿಸಿದೆ. ಆದರೆ, ಸಲ್ಲಿಸಿದ ಅರ್ಜಿಗಳ ಪೈಕಿ ತಾಲ್ಲೂಕಿನ 627 ಅರ್ಜಿಗಳನ್ನು ತಿರಸ್ಕರಿಸಿರುವುದು ಖಂಡನೀಯ. ಕೆಲವರು ದೌರ್ಜನ್ಯದಿಂದ ಒತ್ತುವರಿ ಮಾಡಿಕೊಂಡಿದ್ದಾರೆ. ಇದಕ್ಕೆ ಅಧಿಕಾರಿಗಳ ಕುಮ್ಮಕ್ಕು ನೀಡಿದ್ದಾರೆ’ ಎಂದು ಸಂಘಟನೆಯ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ಗುರುರಾಜ ಮುಕ್ಕುಂದಾ ಆಪಾದಿಸಿದರು.

‘ಕಂದಾಯ ಇಲಾಖೆ ಅಧಿಕಾರಿಗಳು ಪಂಚನಾಮೆ ಸಂದರ್ಭದಲ್ಲಿ ಭೂ ರಹಿತರ ಹೆಸರು ಕೈಬಿಟ್ಟು, ಪಟ್ಟಭದ್ರ ಹಿತಾಸಕ್ತಿಗಳ ಹೆಸರು ಸೇರ್ಪಡೆ ಮಾಡಿ, ಅರ್ಹರಿಗೆ ಅನ್ಯಾಯ ಮಾಡಿದ್ದಾರೆ. ಆದ್ದರಿಂದ ತಕ್ಷಣವೇ ಪ್ರಭಾವಿಗಳ ಕಪಿಮುಷ್ಠಿಯಲ್ಲಿ ಒತ್ತುವರಿಯಾಗಿರುವ ಜಮೀನುಗಳನ್ನು ತೆರವುಗೊಳಿಸಿ ಭೂಹೀನರಿಗೆ ಭೂ ಮಂಜೂರಾತಿ ನೀಡಬೇಕು. ನಿರ್ಲಕ್ಷ್ಯ ವಹಿಸಿದರೆ ಮಿನಿವಿಧಾನಸೌಧ ಕಚೇರಿಯ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಸಿಂಧನೂರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.14, 15, 17 ಮತ್ತು 19 ರಲ್ಲಿರುವ 40ನೇ ಉಪಕಾಲುವೆಗೆ ಹೊಂದಿಕೊಂಡು ನೂರಾರು ಬಡವರು ಶೆಡ್ ಮತ್ತು ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದಾರೆ. ಹಕ್ಕುಪತ್ರ ವಿತರಣೆಗಾಗಿ ಕಳೆದ 40 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ನಗರಸಭೆ ಪೌರಾಯುಕ್ತರಾಗಲಿ, ಶಾಸಕರಾಗಲಿ ಸ್ಪಂದನೆ ನೀಡುತ್ತಿಲ್ಲ. ಕೂಡಲೇ ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸದಿದ್ದರೆ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಸಿದರು.

ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಮನವಿ ಪತ್ರ ಸ್ವೀಕರಿಸಿ, ಈ ಕುರಿತು ಜಿಲ್ಲಾಧಿಕಾರಿ ಮತ್ತು ನಗರಸಭೆ ಪೌರಾಯುಕ್ತರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಕಲ್ಯಾಣ ಕರ್ನಟಕ ಗೌರವ ಅಧ್ಯಕ್ಷ ಅಶೋಕ ಮೇಗಳಮನಿ, ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಸೂಲಂಗಿ, ಯುವ ಘಟಕದ ಅಧ್ಯಕ್ಷ ಪಾಮಯ್ಯ ಹೊಸಳ್ಳಿ, ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಬಾದರ್ಲಿ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ದುರುಗೇಶ ಬಾಲಿ, ಸದಸ್ಯರಾದ ಮಹಾನಂದಮ್ಮ, ಅನ್ನಪೂರ್ಣ, ವಿಜಯಕುಮಾರ, ರೇಣುಕಮ್ಮ, ಶಿವಮ್ಮ, ರಮೇಶ ಬಸಾಪುರ ಹಾಗೂ ಬೇಗಂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.