ADVERTISEMENT

ರಾಯಚೂರು:ಬಂದ್‌ಗೆ ನೀರಸ ಪ್ರತಿಕ್ರಿಯೆ, ವಿವಿಧೆಡೆ ಪ್ರತಿಭಟನೆ

ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಪ್ರಗತಿಪರ ಸಂಘಟನೆಗಳಿಂದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 14:26 IST
Last Updated 26 ನವೆಂಬರ್ 2020, 14:26 IST
ಅಖಿಲ ಭಾರತ ಮುಷ್ಕರವನ್ನು ಬೆಂಬಲಿಸಿ ರಾಯಚೂರಿನ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಸಿಐಟಿಯು ನೇತೃತ್ವದಲ್ಲಿ ಗುರುವಾರ ರಸ್ತೆತಡೆ ನಡೆಲಾಯಿತು
ಅಖಿಲ ಭಾರತ ಮುಷ್ಕರವನ್ನು ಬೆಂಬಲಿಸಿ ರಾಯಚೂರಿನ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಸಿಐಟಿಯು ನೇತೃತ್ವದಲ್ಲಿ ಗುರುವಾರ ರಸ್ತೆತಡೆ ನಡೆಲಾಯಿತು   

ರಾಯಚೂರು: ಕೇಂದ್ರ ಸರ್ಕಾರವು ರೈತರು ಮತ್ತು ಕಾರ್ಮಿಕರ ವಿರುದ್ಧ ನೀತಿಗಳನ್ನು ರೂಪಿಸುತ್ತಿದೆ ಎಂದು ಪ್ರಗತಿಪರ ಸಂಘಟನೆಗಳು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿರುವುದನ್ನು ಬೆಂಬಲಿಸಿ, ರಾಯಚೂರು ಜಿಲ್ಲೆಯಾದ್ಯಂತ ಗುರುವಾರ ಪ್ರತಿಭಟನೆಗಳು, ಧರಣಿಗಳು ಮತ್ತು ರಸ್ತೆತಡೆ ನಡೆಸಲಾಯಿತು. ಸ್ವಯಂಪ್ರೇರಿತ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ರಾಯಚೂರು ನಗರದಾದ್ಯಂತ ಬೆಳಿಗ್ಗೆಯಿಂದ ಮೆರವಣಿಗೆ ನಡೆಸಿದ ಸಂಘಟನೆಗಳು ಬಂದ್‌ ಬೆಂಬಲಿಸುವಂತೆ ಕೋರಿದರು. ಇದರಿಂದಾಗಿ ಮಾರುಕಟ್ಟೆಯಲ್ಲಿ ಕೆಲವು ಅಂಗಡಿ ಮುಗ್ಗಟ್ಟುಗಳು ಮಧ್ಯಾಹ್ನದವರೆಗೂ ಬಂದ್‌ಗೆ ಬೆಂಬಲ ನೀಡಿದವು. ತರಕಾರಿ ಮಾರುಕಟ್ಟೆ ಸೇರಿದಂತೆ ಅಗತ್ಯ ವಸ್ತುಗಳ ವಹಿವಾಟಿಗೆ ಯಾವುದೇ ಧಕ್ಕೆ ಆಗಲಿಲ್ಲ. ಎಂದಿನಂತೆ ವ್ಯಾಪಾರ, ವಾಹನಗಳ ಸಂಚಾರ ಮುಂದುವರಿದಿತ್ತು.

ಡಾ.ಬಿ. ಆರ್‌.ಅಂಬೇಡ್ಕರ್‌ .ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನಾಕಾರರು ಬೆಳಿಗ್ಗೆ ರಸ್ತೆತಡೆ ನಡೆಸಿದ್ದರಿಂದ ವಾಹನಗಳ ಸಂಚಾರಕ್ಕೆ ಕೆಲಕಾಲ ತೊಂದರೆ ಆಯಿತು. ಹತ್ತಿ ಸಾಗಿಸುವ ವಾಹನಗಳು ಹೆದ್ದಾರಿಯುದ್ದಕ್ಕೂ ನಿಂತಿದ್ದವು. ಕೇಂದ್ರ ಬಸ್‌ ನಿಲ್ದಾಣದಿಂದ ಹೊರಬರುವ ಬಸ್‌ಗಳು ಗಾಲಿಬ್‌ ಕಾಲೋನಿ ಮೂಲಕ ಟಿಪ್ಪು ಸುಲ್ತಾನ್‌ ರಸ್ತೆಯಿಂದ ಸಂಚರಿಸಿದವು. ಮಧ್ಯಾಹ್ನ 2 ಗಂಟೆವರೆಗೂ ರಸ್ತೆಯಲ್ಲೀ ಮುಷ್ಕರ ನಡೆಸಲಾಯಿತು. ರಾಷ್ಟ್ರೀಯ ಹೆದ್ದಾರಿಯ ಒಂದು ಮಾರ್ಗದಲ್ಲಿ ಮಾತ್ರ ವಾಹನಗಳು ಸಂಚರಿಸಬೇಕಾಯಿತು.

ADVERTISEMENT

ಕಾರ್ಮಿಕ ಸಂಘಗಳ ಜಂಟಿ ಸಮಿತಿ ಜಿಲ್ಲಾ ಘಟಕ (ಜೆಸಿಟಿಒಯು) ಪದಾಧಿಕಾರಿಗಳು ನಗರದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಬಿಜೆಪಿ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಆನಂತರ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು. ಯಾವುದೇ ಕಾನೂನುಗಳನ್ನು ಜಾರಿಗೊಳಿಸುವ ಮುನ್ನ ಸಂಬಂಧಪಟ್ಟ ಸಮುದಾಯದೊಂದಿಗೆ ಚರ್ಚೆ ನಡೆಸದೇ ಸರ್ವಾಧಿಕಾರಿ ಧೋರಣೆಯನ್ನು ಸರ್ಕಾರ ಅನುಸರಿಸುತ್ತಿದೆ. 44 ಕಾರ್ಮಿಕ ಕಾನೂನುಗಳನ್ನು ಸಮೀಕರಿಸಿ 4 ಕಾರ್ಮಿಕ ಸಂಹಿತೆಗಳನ್ನಾಗಿ ಮಾಡುತಿದ್ದು ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚೆ ನಡೆಸದೇ ಏಕಪಕ್ಷೀಯವಾಗಿ ಜಾರಿಗೊಳಿಸಲು ಮುಂದಾಗಿದೆ ಎಂದು ದೂರಿದರು.

ಕಾರ್ಮಿಕ ಸಂಘಟನೆಯ ಮುಖಂಡ ಡಿಎಸ್. ಶರಣಬಸವ, ವೀರೇಶ ಎನ್.ಎಸ್. ಎಂ. ರವಿ, ಬಸವರಾಜ ಗಾರಲದಿನ್ನಿ, ವರಲಕ್ಷ್ಮೀ, ಎಚ್. ಪದ್ಮಾ, ಪ್ರಾಣೇಶ ಮುತಾಲಿಕ್, ಎಂ. ಶರಣೇಗೌಡ, ಸಲಾವುದ್ದೀನ್, ವಿ.ಎಮ್. ಉಕ್ಕಲಿ, ಅಣ್ಣಪ್ಪ, ಪೀರ್ ಸಾಬ್, ಮಹೇಶ ಚೀಕಲಪರ್ವಿ, ಎಸ್ಎಫ್ ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮ್ಯಾನಿ, ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, ಕಾರ್ತಿಕ, ಅಪೂರ್ವ ಸೇರಿದಂತೆ ಮತ್ತಿತರರು ಇದ್ದರು.

ರೈತ ಸಂಘರ್ಷ ಸಮಿತಿ: ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‍ಸಿಸಿ) ಜಿಲ್ಲಾ ಘಟಕದಿಂದ ರಾಯಚೂರು ತಾಲ್ಲೂಕಿನ ಯರಗೇರಾ ವ್ಯಾಪ್ತಿಯ ಕರ್ನೂಲ್‌ ರಸ್ತೆ ಬಳಿ ರಸ್ತೆ ತಡೆ ನಡೆಸಿದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು. ಆನಂತರ ನಾಡ ಕಚೇರಿ ಉಪ ತಹಶಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಸಂಚಾಲಕ ಕೆ.ಜಿ.ವೀರೇಶ, ಆಂಜಿನಯ್ಯ ಕುರುಬದೊಡ್ಡಿ, ಖಾಜಾ ಅಸ್ಲಂ, ಲಕ್ಷ್ಮಣಗೌಡ ಕಡಗಂದೊಡ್ಡಿ, ಶ್ರೀನಿವಾಸ ಕೊಪ್ಪರ, ಪ್ರಮೋದ, ಗೋವಿಂದ ಬಾಯಿದೊಡ್ಡಿ, ಪ್ರಸಾದ ಇದ್ದರು.

ಸಂಘರ್ಷ ಸಮಿತಿ: ತಾಲ್ಲೂಕಿನ ಸಾಥ್ ಮೈಲ್ ಕ್ರಾಸ್ ಬಳಿ ಮಾರೆಪ್ಪ ಹರವಿ ನೇತೃತ್ವದಲ್ಲಿ ರೈತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ, ಸುಗುರಯ್ಯ ಹಿರೇಮಠ, ವಿವಿಧ ಸಂಘಟನೆಯ ಮುಖಂಡರಾದ ಕರಿಯಪ್ಪ ಅಚ್ಚೊಳ್ಳಿ, ರಾಮ್ ಬಾಬು, ಬಸವರಾಜ, ಗುರುರಾಜ, ರಾಘವೇಂದ್ರ, ಲಕ್ಷ್ಮಣ ಮಂಡಲಗೇರಾ ಮತ್ತಿತರರು ಇದ್ದರು.

ವಿದ್ಯಾರ್ಥಿ ಸಂಘಟನೆಗಳ ಬೆಂಬಲ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಾರಿಗೊಳಿಸಲು ಹೊರಟಿರುವ ರೈತ, ಕಾರ್ಮಿಕ ಮತ್ತು ಜನ ವಿರೋಧಿ ಮಸೂದೆಗಳನ್ನು ವಿರೋಧಿಸಿ ಕಾರ್ಮಿಕ, ರೈತ ಸಂಘಟನೆಗಳು ಕರೆ ಕೊಟ್ಟಿರುವ ಅಖಿಲ ಭಾರತ ಮುಷ್ಕರ ವನ್ನು ಬೆಂಬಲಿಸಿ ರಾಯಚೂರಿನಲ್ಲಿ ಇಂದು ವಿದ್ಯಾರ್ಥಿ ಸಂಘಟನೆಗಳಾದ ಎಸ್‌ಎಫ್‌ಐ, ಎಐಡಿಎಸ್‌ಒ ಮತ್ತು ಕೆವಿಎಸ್‌ ಸಂಘಟನೆಗಳು ಜಂಟಿಯಾಗಿ ಮುಷ್ಕರದಲ್ಲಿ ಪಾಲ್ಗೊಂಡಿದ್ದವು.
ಕೇಂದ್ರ ಸರ್ಕಾರವು ಜಾರಿ ಮಾಡಲು ಹೊರಟಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಇದ್ದು, ಭಾರತದ ಇನ್ನುಳಿದ ರಾಷ್ಟ್ರೀಯ ಪ್ರಾದೇಶಿಕ ಭಾಷೆಗಳಲ್ಲಿ ಇಲ್ಲ ಮತ್ತು ಸಾರ್ವಜನಿಕವಾಗಿ ಹಾಗೂ ಕೇಂದ್ರ ಹಾಗೂ ರಾಜ್ಯಗಳ ಶಾಸನ ಸಭೆಯಲ್ಲಿ ಚರ್ಚೆಯಾಗದೆ, ಅದರ ಸಾಧಕ-ಬಾಧಕಗಳನ್ನು ಅರಿಯದೆ ಜಾರಿ ಮಾಡಲು ಹೊರಟಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತದೆ ಎಂದರು.

ಈ ಶಿಕ್ಷಣ ನೀತಿಯ ಸಾಧಕ-ಬಾಧಕಗಳನ್ನು ಅರಿತು ನಂತರ ಲೋಪ ದೋಷಗಳನ್ನು ಸರಿಪಡಿಸಬೇಕು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.