
ಲಿಂಗಸುಗೂರು: ‘ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜೀವನ ಮತ್ತು ಸಾಧನೆಗಳು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ’ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸುಜಾತಾ ಹೂನೂರು ಹೇಳಿದರು.
ಪಟ್ಟಣದ ಗುರುಭವನದಲ್ಲಿ ಭಾನುವಾರ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆಯವರ ಜನ್ಮದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಾವಿತ್ರಿಬಾಯಿ ಫುಲೆ ಅವರು ಪುರುಷ ಪ್ರಧಾನ ಸಮಾಜದಲ್ಲಿ ಅನೇಕ ಸವಾಲು ಎದುರಿಸಿ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ದಾರಿತೋರಿದರು. ಫುಲೆಯವರು ಶಾಲೆಗೆ ಹೋಗುವಾಗ ಸಮಾಜದ ಕಿಡಿಗೇಡಿಗಳು ಅವರ ಮೇಲೆ ಸಗಣಿ, ಮಣ್ಣು ಎಸೆಯುತ್ತಿದ್ದರು. ಆದರೂ ಎದೆಗುಂದದೆ ಅವರು ಅಕ್ಷರ ಕ್ರಾಂತಿ ಮಾಡಿದರು. ತಮ್ಮ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ ಸೇರಿ ಅನೇಕ ಶಾಲೆಗಳನ್ನು ಪ್ರಾರಂಭಿಸಿ, ಹೆಣ್ಣುಮಕ್ಕಳು ಹಾಗೂ ದಲಿತ ಮಕ್ಕಳಿಗೆ ಶಿಕ್ಷಣ ನೀಡಿದರು. ಅಸ್ಪೃಶ್ಯತೆಯ ವಿರುದ್ಧ ಹೋರಾಟ ನಡೆಸಿ, ವಿಧವಾ ಮಹಿಳೆಯರಿಗೆ ಆಶ್ರಯ ನೀಡಿದ ಅವರು ಬಾಲ್ಯವಿವಾಹ ತಡೆಗಟ್ಟಲು ಹೋರಾಡಿದ್ದರು. ಅಂದು ಅವರು ಸಮಾಜದಲ್ಲಿ ಸಮಾನತೆಗಾಗಿ ಮಾಡಿದ ಹೋರಾಟದ ಅವರ ಜೀವನ ಮತ್ತು ತ್ಯಾಗ ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಿದ್ದು, ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಣ ಸಮಾಜದ ಪರಿವರ್ತನೆಯಾಗಿದೆ. ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಮಹಿಳಾ ಶಿಕ್ಷಣ ಸಬಲೀಕರಣವಾದರೆ ಅದು ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿದೆ’ ಎಂದು ಹೇಳಿದರು.
ಅಬಕಾರಿ ನಿರೀಕ್ಷಕಿ ಲಕ್ಷ್ಮೀದೇವಿ, ಕ್ಷೇತ್ರ ಸಮನ್ವಯಾಧಿಕಾರಿ ಹನುಮಂತಪ್ಪ ಕ್ವಾರಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಛಾಯಾದೇವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮೀ, ತಾಲ್ಲೂಕು ಘಟಕದ ಅಧ್ಯಕ್ಷೆ ಸುನಂದಾ ಮೋದಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷೆ ಹಾಜಿಬಾಬು ಕಲ್ಯಾಣಿ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಗದ್ದಿ, ತಾಲ್ಲೂಕು ಘಟಕದ ಅಧ್ಯಕ್ಷ ಬಸಪ್ಪ ಹಂದ್ರಾಳ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗುರುಸಂಗಯ್ಯ ಗಣಾಚಾರಿ, ಸಂಗಪ್ಪ ಅಡವಿಭಾವಿ, ಅಮರಪ್ಪ ಸಾಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘ ಅಧ್ಯಕ್ಷ ಶಾಂತೇಶ ವಗ್ಗರ, ರಂಗಣ್ಣ ದೇವರಗುಡಿ, ರಮಾದೇವಿ ಶಂಭೋಜಿ, ಈರಮ್ಮ, ಧನಲಕ್ಷ್ಮೀ, ಮಂಜುಳಾ, ನಾಗಲಕ್ಷ್ಮೀ, ಲಕ್ಷ್ಮೀ, ಲಕ್ಷ್ಮೀದೇವಿ ನಡುವಿನಮನಿ, ಡಾ.ಶಶಿಕಲಾ ಭೋವಿ, ವಿಜಯಲಕ್ಷ್ಮೀ ಇನ್ನಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.