
ಲಿಂಗಸುಗೂರು: ‘ತಾಲ್ಲೂಕಿನ ಗೆಜ್ಜಲಗಟ್ಟಾ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿದ ವೀರ ನಾಗಮ್ಮ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ ಫೆ.15ರಿಂದ 20 ರವರೆಗೆ ನಡೆಯಲಿದೆ. ಕಾರ್ಯಕ್ರಮದ ಯಶಸ್ಸಿಗೆ ತಾಲ್ಲೂಕಿನ ಜನತೆ ಸಹಕಾರ ನೀಡಬೇಕು’ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ಆರ್.ಎಂ.ಎಸ್. ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವೀರನಾಗಮ್ಮ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದ ಪೋಸ್ಟರ್ ಹಾಗೂ ಧ್ವನಿಸುರಳಿ ಬಿಡುಗಡೆ ಮಾಡಿ ಮಾತನಾಡಿದರು.
‘ದೇವಸ್ಥಾನದ ಲೋಕಾರ್ಪಣೆ ಪ್ರಯುಕ್ತ ಫೆ.15ರಿಂದ 20 ರವರೆಗೆ ಪ್ರತಿದಿನ ಸಂಜೆ ಧರ್ಮಸಭೆ, ಗಾಯಕರಿಂದ ಸಂಗೀತ ಕಾರ್ಯಕ್ರಮ, ಕಾಮಿಡಿ ಕಿಲಾಡಿ ತಂಡಗಳಿಂದ ಹಾಸ್ಯಮಂಜರಿ ಕಾರ್ಯಕ್ರಮ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಪೂರ್ಣ ಕುಂಭ–ಕಳಸದ ಮೆರವಣಿಗೆ, ರಂಭಾಪುರಿ ಸ್ವಾಮೀಜಿಯ ಅಡ್ಡಪಲ್ಲಕ್ಕಿ ಉ ತ್ಸವ ನಡೆಯಲಿದೆ’ ಎಂದು ಹೇಳಿದರು.
‘ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಸಮಾರಂಭದ ಯಶಸ್ವಿಗೆ ರಚಿಸಲಾಗಿರುವ ಸಮಿತಿಗಳಿಗೆ ವಹಿಸುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮಂಡಲ ಅಧ್ಯಕ್ಷರಾದ ಕೆ.ನಾಗಭೂಷಣ, ಹುಲ್ಲೇಶ ಸಾಹುಕಾರ, ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಅಯ್ಯಪ್ಪ ಮಾಳೂರು, ಜಗನ್ನಾಥ ಕುಲಕರ್ಣಿ, ಭೀಮಸೇನ ಕುಲಕರ್ಣಿ, ಜೀವಲೆಪ್ಪ ನಾಯ್ಕ, ನಾರಾಯಣಪ್ಪ ನಾಯ್ಕ ಹಾಗೂ ಸಿದ್ದಯ್ಯಸ್ವಾಮಿ ತಲೆಕಟ್ಟು ಇದ್ದರು.