ADVERTISEMENT

ಲಿಂಗಸುಗೂರು: ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 6:30 IST
Last Updated 11 ನವೆಂಬರ್ 2025, 6:30 IST
<div class="paragraphs"><p>ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಕರಡಕಲ್ ಹೊರವಲಯದಲ್ಲಿ ನಿರ್ಮಾಣವಾದ ತಾಯಿ ಮಕ್ಕಳ ಆಸ್ಪತ್ರೆ</p></div>

ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಕರಡಕಲ್ ಹೊರವಲಯದಲ್ಲಿ ನಿರ್ಮಾಣವಾದ ತಾಯಿ ಮಕ್ಕಳ ಆಸ್ಪತ್ರೆ

   

ಲಿಂಗಸುಗೂರು: ಪುರಸಭೆ ವ್ಯಾಪ್ತಿಯ ಕರಡಕಲ್ ಹೊರವಲಯದಲ್ಲಿ ತಾಯಿ–ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.

2022-23ನೇ ಸಾಲಿನಲ್ಲಿ ತಾಲ್ಲೂಕಿಗೆ ಸರ್ಕಾರ 100 ಹಾಸಿಗೆ ಸಾಮಾರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು ಮಾಡಿತ್ತು. ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ₹30 ಕೋಟಿ ಬಿಡುಗಡೆಗೊಳಿಸಲಾಗಿತ್ತು. ಕರಡಕಲ್ ಹೊರವಲಯದಲ್ಲಿ ತಾಯಿ–ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ 2023 ಮಾರ್ಚ್‌ 22ರಂದು ಆಗಿನ ಶಾಸಕ ಡಿ.ಎಸ್. ಹೂಲಗೇರಿ ಭೂಮಿಪೂಜೆ ನೆರವೇರಿಸಿದ್ದರು. ಆಸ್ಪತ್ರೆ ಕಟ್ಟಡದ ಕೆಲ ಸಣ್ಣ ಪುಟ್ಟ ಕಾಮಗಾರಿಗಳನ್ನು ಹೊರತು ಪಡಿಸಿದರೆ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ.

ADVERTISEMENT

ಎರಡು ಅಂತಸ್ತಿನ ಕಟ್ಟಡದಲ್ಲಿ 100 ಹಾಸಿಗೆ ಸಾಮಾರ್ಥವುಳ್ಳ ತಾಯಿ ಮತ್ತು ಮಕ್ಕಳ ವಾರ್ಡ್‌, 24/7 ತುರ್ತು ಸೇವೆ, ನವಜಾತ ಶಿಶು ಆರೈಕೆ ಘಟಕ, ತೀವ್ರ ನಿಗಾ ಘಟಕ, ಎನ್‌ಬಿಸಿಸಿ, ಎಸ್‌ಎನ್‌ಸಿಯು, ಕೆಎಂಸಿ, ಆಪರೇಷನ್‌ ಥಿಯೇಟರ್‌, ಹೊರರೋಗಿಗಳ ವಿಭಾಗ, ಸ್ಕ್ಯಾ‌ನಿಂಗ್‌, ಎಕ್ಸ್‌ರೇ, ರಕ್ತ ನಿಧಿ ಕೇಂದ್ರ, ವಿಶೇಷ, ಜನರಲ್‌ ವಾರ್ಡ್‌, ತಪಾಸಣೆ , ಸಿಬ್ಬಂದಿ , ಸಂದರ್ಶನ ಕೊಠಡಿ, ಔಷಧ ವಿತರಣಾ ಮಳಿಗೆ, ಲಿಫ್ಟ್ ವ್ಯವಸ್ಥೆ, ಜನರೇಟರ್‌, ಪ್ರತ್ಯೇಕ ವಿದ್ಯುತ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಾಗಿ ವಸತಿ ಗೃಹ ನಿರ್ಮಾಣ ಮಾಡಲಾಗಿದೆ. ತಾಯಿ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಆಸ್ಪತ್ರೆಗೆ ಅಗತ್ಯವಾಗಿರುವ ವೈದ್ಯರು, ಸಿಬ್ಬಂದಿ ನೇಮಕ ಹಾಗೂ ಆಸ್ಪತ್ರೆಗೆ ಬೇಕಾದ ಯಂತ್ರೋಪಕರಣ ಒದಗಿಸಬೇಕಾಗಿದೆ.

100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಯಾವಾಗಲೂ ಸಾರ್ವಜನಿಕರು ಹಾಗೂ ತಪಾಸಣೆಗೆ ಬರುವುದರಿಂದ ಗಿಜಗುಡುತ್ತದೆ. ದಿನವೂ ರೋಗಿಗಳ ಸಂಖ್ಯೆ ಜಾಸ್ತಿ. ಈ ನಡುವೆ ಹೆರಿಗೆ, ಬಾಣಂತಿಯರಿಗೆ ಚಿಕಿತ್ಸೆ, ಗರ್ಭಿಣಿಯರಿಗೆ ಹಲವು ತಪಾಸಣೆ ಬರುವವರಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಈಗಿನ ಜನಸಂಖ್ಯೆ ಆಧಾರದಲ್ಲಿ ವೈದ್ಯರು, ಸಿಬ್ಬಂದಿ ನೇಮಕಾತಿ ಇಲ್ಲದೆ ನಾನಾ ಸಮಸ್ಯೆ ಎದುರಿಸಬೇಕಾಗುತ್ತದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭವಾದರೆ ತಾಲ್ಲೂಕು ಆಸ್ಪತ್ರೆಗೆ ಒಂದಿಷ್ಟು ಒತ್ತಡ ತಗ್ಗಲಿದ್ದು, ಜನಜಂಗುಳಿಯೂ ಕಡಿಮೆಯಾಗಲಿದೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ.

'ಸೌಕರ್ಯಕ್ಕಾಗಿ ಸರ್ಕಾರಕ್ಕೆ ಪತ್ರ’

ತಾಯಿ ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ ಶೇ 95ರಷ್ಟು ಮಗಿದಿದೆ. ಇನ್ನೂ ಸಣ್ಣ ಪುಟ್ಟ ಕಾಮಗಾರಿ ನಡೆಯುತ್ತಿದೆ. ಪೂರ್ಣಗೊಂಡ ನಂತರ ಉದ್ಘಾಟನೆ ಮಾಡಲಾಗುವುದು. ಉದ್ಘಾಟನೆ ಮಾಡಿದ ನಂತರ ಕೂಡಲೇ ಕಾರ್ಯಾರಂಭ ಮಾಡುವ ಹಿನ್ನಲೆಯಲ್ಲಿ ತಾಯಿ–ಮಕ್ಕಳ ಆಸ್ಪತ್ರೆಗೆ ವೈದ್ಯರು ಸಿಬ್ಬಂದಿ ನೇಮಕ ಹಾಗು ಅಗತ್ಯ ಸೌಕರ್ಯ ಒದಗಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಶಾಸಕ ಮಾನಪ್ಪ ವಜ್ಜಲ ಹೇಳಿದ್ದಾರೆ.

ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿಗಳ ವಸತಿ ಗೃಹಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.