
ಸಿಂಧನೂರು: ಗ್ರಾಮ ಪಂಚಾಯಿತಿ ಸೇರಿದಂತೆ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಜ್ಞಾನಧಾಮ ಸಹಜ ಶಿಕ್ಷಣ ಯೋಜನಾ ವೇದಿಕೆಯಿಂದ ಕಾರ್ಯಾಗಾರ ನಡೆಸಲು ನಿರ್ಧರಿಸಿರಲಾಗಿದೆ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ. ದೊಡ್ಡಬಸವರಾಜ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಥಳೀಯ ಸಂಸ್ಥೆಗಳು ಭವಿಷ್ಯದ ಯಶಸ್ಸಿನ ಹೆಬ್ಬಾಗಿಲಾಗಿದೆ. ಸ್ಥಳೀಯ ಸಂಸ್ಥೆಗಳು ಸದಸ್ಯರಿಗೆ ಜನಸೇವೆ ಮಾಡಲು ರಾಜಮಾರ್ಗಗಳಾಗಿವೆ. ಸ್ವಹಿತಾಸಕ್ತಿಗಳ ರಾಜಕಾರಣಿಗಳಾಗಿ ಗುಂಪುಗಳಲ್ಲಿ ಕಳೆದು ಹೋಗದೆ ನಾಯಕರಾಗಿ ಬೆಳೆಯಲು ಕಾರ್ಯಾಗಾರ ನೆರವಾಗಲಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸಬೇಕು ಎನ್ನುವ ಬಯಕೆ ಇರುವ ವ್ಯಕ್ತಿಗಳನ್ನು ತರಬೇತುಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
‘ಪಂಚಾಯಿತಿ ವ್ಯವಸ್ಥೆ ನಡೆದು ಬಂದ ದಾರಿ, ಪಂಚಾಯಿತಿಗಳ ರಚನೆ, ಚುನಾವಣೆ ಎದುರಿಸುವ ವಿಧಾನ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರ ಕರ್ತವ್ಯ ಸಂಪನ್ಮೂಲ ಕ್ರೋಢಿಕರಣ ಸಂವಾಹನ ಕೌಶಲ್ಯ ಮತ್ತಿತರ ಹಕ್ಕು ಮತ್ತು ಜವಾಬ್ದಾರಿಗಳನ್ನು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ತಿಳಿಸಿ ಕೊಡಲಿದ್ದಾರೆ’ ಎಂದು ವಿವರಿಸಿದರು.
ಜ್ಞಾನಧಾಮ ಸಹಜ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಆಡಳಿತಾಧಿಕಾರಿ ರಸುಲ್‍ಸಾಬ ಮಾತನಾಡಿ, ‘ಮೌಲ್ಯಾಧಾರಿತ ರಾಜಕಾರಣ ಮಾಯವಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ರಾಜಕಾರಣದ ಮೌಲ್ಯಗಳನ್ನು ತಿಳಿಸುವ ಮತ್ತು ಅಧಿಕಾರ ವಿಕೇಂದ್ರೀಕರಣದ ಮಹತ್ವ ತಿಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
‘ಕಾರ್ಯಾಗಾರದಲ್ಲಿ ಭಾಗವಹಿಸುವ ಆಸಕ್ತರು ನ. 17ರಿಂದ ಉಚಿತವಾಗಿ ತಮ್ಮ ಸಂಸ್ಥೆಯಲ್ಲಿ ನೋಂದಣಿ ಮಾಡಿಸಬಹುದಾಗಿದೆ’ ಎಂದು ತಿಳಿಸಿದರು.
ಟ್ರಸ್ಟ್ ಸದಸ್ಯರಾದ ಮರಿಸ್ವಾಮಿ, ಮಾನಪ್ಪ, ವೆಂಕನಗೌಡ, ರಫಿ ಕುನ್ನಟಗಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.