ಕವಿತಾಳ: ಪಟ್ಟಣದ ಹುಸೇನಪುರ ಕ್ರಾಸ್‌ನಿಂದ ಮಸ್ಕಿ ಕ್ರಾಸ್‌ವರೆಗೆ ಕೈಗೊಂಡಿದ್ದ ರಸ್ತೆ ಅಗಲೀಕರಣ ಹಾಗೂ ವಿಭಜಕ ನಿರ್ಮಾಣ ಕಾಮಗಾರಿ ಸ್ಥಗಿತವಾಗಿದ್ದು ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ.
ಒಂದೆಡೆ ಬೇಸಿಗೆಯ ರಣ ಬಿಸಿಲು, ಮತ್ತೊಂದೆಡೆ ವಿಪರೀತ ದೂಳಿನಿಂದ ಬೇಸತ್ತ ಸಾರ್ವಜನಿಕರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ದ ಹಿಡಿ ಶಾಪ ಹಾಕುತ್ತಿದ್ದಾರೆ.
ರಸ್ತೆ ಅಗಲೀಕರಣ ಮಾಡದೇ ಅವೈಜ್ಞಾನಿಕವಾಗಿ ವಿಭಜಕ ನಿರ್ಮಾಣ ಮಾಡುತ್ತಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ವಾಹನಗಳು ರಸ್ತೆ ಬದಿ ಚಲಿಸುವುದರಿಂದ ದೂಳು ಹೆಚ್ಚಿದೆ. ಪದೇ ಪದೇ ಅವಘಡಗಳು ಸಂಭವಿಸುತ್ತಿವೆ.
ಈ ಹಿನ್ನೆಲೆಯಲ್ಲಿ ರಸ್ತೆ ಬದಿ ವಿದ್ಯುತ್ ಕಂಬಗಳ ತೆರವು, ರಸ್ತೆ ಅಗಲೀಕರಣ ಹಾಗೂ ಹೊಸದಾಗಿ ವಿಭಜಕ ನಿರ್ಮಾಣ ಮಾಡುವ ಅಂದಾಜು ₹23 ಕೋಟಿ ವೆಚ್ಚದ ಕಾಮಗಾರಿಗೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸಚಿವ ಎನ್.ಎಸ್.ಬೋಸರಾಜು ಹಾಗೂ ಶಾಸಕ ಜಿ.ಹಂಪಯ್ಯ ನಾಯಕ ಭೂಮಿ ಪೂಜೆ ಮಾಡಿದ್ದರು.
ಕಾಮಗಾರಿ ಆರಂಭಿಸಿದ ಗುತ್ತಿಗೆದಾರರು ಆರು ತಿಂಗಳ ಅವಧಿಯಲ್ಲಿ ಹುಸೇನಪುರ ಕ್ರಾಸ್‌ನಿಂದ ಜೆಸ್ಕಾಂ ಕಚೇರಿವರೆಗೆ ರಸ್ತೆ ಅಗಲೀಕರಣ ಮಾಡಿ ಕಂಕರ್ ಹರಡಿದ್ದಾರೆ. ಕೆಲವು ಸೇತುವೆಗಳನ್ನು ನಿರ್ಮಿಸಿದ್ದು ಹೊರತುಪಡಿಸಿ ಒಂದು ತಿಂಗಳಿಂದ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ಹದಗೆಟ್ಟ ರಸ್ತೆಯಿಂದ ಕಳೆದ ಮೂರು ವರ್ಷಗಳಿಂದ ಪಟ್ಟಣದ ನಾಗರಿಕರು ಸಮಸ್ಯೆ ಎದುರಿಸುವಂತಾಗಿದೆ. ರಸ್ತೆ ಬದಿ ವರ್ತಕರು, ವಾಹನ ಸವಾರರು ದೂಳಿನಿಂದ ಬೇಸತ್ತಿದ್ದು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರು ತಿಂಗಳಿಂದ ಆಮೆಗತಿಯಲ್ಲಿ ನಡೆದ ಕಾಮಗಾರಿ ಇದೀಗ ಸಂಪೂರ್ಣ ಸ್ಥಗಿತವಾಗಿದೆ.
‘ಸರ್ಕಾರದಲ್ಲಿ ಹಣ ಇಲ್ಲ. ಹೀಗಾಗಿ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ ಎನ್ನುವ ವದಂತಿ ಹರಡಿದೆ. ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಿ ಶೀಘ್ರ ಕಾಮಗಾರಿ ಆರಂಭಿಸಬೇಕು’ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮೌನೇಶ ಹಿರೇಕುರಬರ ಒತ್ತಾಯಿಸಿದರು.
ಆರು ತಿಂಗಳು ಕಳೆದರೂ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಂಡಿಲ್ಲ. ಇದೀಗ ಸ್ಥಗಿತವಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ಸಾರ್ವಜನಿಕರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆಎಂ.ಡಿ.ಮೆಹಬೂಬ್ ಕವಿತಾಳ ಕಾರ್ಮಿಕ ಸಂಘಟನೆ ಮುಖಂಡ
ವಿದ್ಯುತ್ ಕಂಬಗಳ ಸ್ಥಳಾಂತರ ಮರಗಳ ತೆರವಿಗೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಮತ್ತಿತರ ಕಾರಣಗಳಿಂದ ಕಾಮಗಾರಿ ಸ್ಥಗಿತವಾಗಿದೆ. ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಈಗಾಗಲೇ ಸೂಚಿಸಲಾಗಿದೆಶಂಕರ ನಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲೊಕೋಪಯೋಗಿ ಇಲಾಖೆ ರಾಯಚೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.